ಪಾಲಕ್ಕಾಡ್, ಜು. 11 (DaijiworldNews/TA): ಇತ್ತೀಚಿನ ದಿನಗಳಲ್ಲಿ ಸಾಲ ಪಡೆದ ಹಣವನ್ನು ಹಿಂದಿರುಗಿಸದೆ ತಪ್ಪಿಸಿಕೊಳ್ಳುವ ಘಟನೆಗಳು ಹೆಚ್ಚುತ್ತಿರುವ ನಡುವೆ, ಕೇರಳದ ವ್ಯಕ್ತಿಯೊಬ್ಬರು 25 ವರ್ಷಗಳ ಹಿಂದೆ ಸ್ನೇಹಿತನಿಂದ ಪಡೆದ ಸಾಲವನ್ನು ಮರಳಿಸಲು ಸಾವಿರಾರು ಕಿಲೋಮೀಟರ್ ಪ್ರಯಾಣ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಪ್ರಾಮಾಣಿಕತೆಯ ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೇರಳದ ಪಾಲಕ್ಕಾಡ್ ಮೂಲದ ಮುಹಮ್ಮದ್ ಇಸ್ಮಾಯಿಲ್ ಈ ಅಪರೂಪದ ಕಾರ್ಯ ಮಾಡಿದ ವ್ಯಕ್ತಿ. ಸುಮಾರು 25 ವರ್ಷಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ವೇಳೆ, ವೈಯಕ್ತಿಕ ಅಗತ್ಯಕ್ಕಾಗಿ ಅವರು ತಮ್ಮ ಸ್ನೇಹಿತ ಎಡ್ಲಾ ಲಚಣ್ಣ ಅವರಿಂದ ಹಣವನ್ನು ಸಾಲವಾಗಿ ಪಡೆದಿದ್ದರು. ಭಾರತಕ್ಕೆ ಮರಳಿದ ಬಳಿಕ ಹಣವನ್ನು ಹಿಂದಿರುಗಿಸುವುದಾಗಿ ಮಾತು ಕೊಟ್ಟಿದ್ದರೂ, ಅನಿವಾರ್ಯ ಕಾರಣಗಳಿಂದ ತಾಯ್ನಾಡಿಗೆ ವಾಪಸಾಗಿ, ಬಳಿಕ ಸ್ನೇಹಿತನ ಸಂಪರ್ಕ ಕಳೆದುಕೊಂಡಿದ್ದರು.
ಆದರೆ ಇಸ್ಮಾಯಿಲ್ ಅವರು ಪಡೆದ ಸಾಲವನ್ನು ಮಾತ್ರ ಎಂದಿಗೂ ಮರೆತಿರಲಿಲ್ಲ. ಇತ್ತೀಚೆಗೆ ಯಾವುದೇ ರೀತಿಯಲ್ಲಾದರೂ ಸ್ನೇಹಿತನನ್ನು ಹುಡುಕಿ ಹಣವನ್ನು ಹಿಂದಿರುಗಿಸಬೇಕೆಂದು ನಿರ್ಧರಿಸಿದರು. ಲಚಣ್ಣ ಅವರ ವಿಳಾಸ ಅಥವಾ ದೂರವಾಣಿ ಸಂಖ್ಯೆ ಇಲ್ಲದಿದ್ದರೂ, ಅವರು ತೆಲಂಗಾಣದ ಧರ್ಮಪುರಿ ಭಾಗದವರಾಗಿದ್ದಾರೆ ಎಂಬ ಮಾಹಿತಿ ಆಧರಿಸಿ ಆನ್ಲೈನ್ನಲ್ಲಿ ಹುಡುಕಾಟ ಆರಂಭಿಸಿದರು.
ಕೊನೆಗೆ ಜಗಿತ್ಯಾಳ ಜಿಲ್ಲೆಯಲ್ಲಿ ಲಚಣ್ಣ ಅವರ ಮನೆ ಪತ್ತೆಹಚ್ಚಿದ ಇಸ್ಮಾಯಿಲ್, ನೇರವಾಗಿ ಅಲ್ಲಿಗೆ ತೆರಳಿದರು. ಆ ವೇಳೆ ಲಚಣ್ಣ ಇನ್ನೂ ಗಲ್ಫ್ ದೇಶದಲ್ಲೇ ಉದ್ಯೋಗದಲ್ಲಿರುವುದು ತಿಳಿದುಬಂದಿತು. ಬಳಿಕ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ತಮ್ಮ ಪರಿಚಯ ಮಾಡಿಕೊಂಡು, ಭೇಟಿಯ ಉದ್ದೇಶ ವಿವರಿಸಿದರು. ಕುಟುಂಬದವರು ಲಚಣ್ಣ ಅವರಿಗೆ ದೂರವಾಣಿ ಕರೆ ಮಾಡಿದ್ದು, 25 ವರ್ಷಗಳ ಬಳಿಕ ಸ್ನೇಹಿತನ ಧ್ವನಿ ಕೇಳಿದ ಅವರು ಭಾವುಕರಾದರು. ಬಳಿಕ ಇಸ್ಮಾಯಿಲ್ ಅವರು ಲಚಣ್ಣ ಅವರ ಕುಟುಂಬಕ್ಕೆ ರೂ. 25,000 ಹಸ್ತಾಂತರಿಸಿ, ವರ್ಷಗಳ ಹಿಂದೆ ಪಡೆದ ಸಾಲವನ್ನು ಮರುಪಾವತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇಸ್ಮಾಯಿಲ್, "ಪಡೆದ ಸಾಲವನ್ನು ತೀರಿಸದೆ ಮನಸ್ಸಿಗೆ ನೆಮ್ಮದಿ ಇರಲಿಲ್ಲ. ಹಣವನ್ನು ಹಿಂದಿರುಗಿಸಿದ ಬಳಿಕ ಮನಸ್ಸಿನ ಭಾರ ಕಡಿಮೆಯಾಗಿದೆ" ಎಂದು ಭಾವುಕರಾಗಿ ಹೇಳಿದರು ಎನ್ನಲಾಗಿದೆ. ಲಚಣ್ಣ ಅವರ ಕುಟುಂಬವೂ ಇಷ್ಟು ವರ್ಷಗಳ ಬಳಿಕವೂ ಮಾತು ಉಳಿಸಿಕೊಂಡು ಹಣವನ್ನು ಹಿಂದಿರುಗಿಸಲು ಇಷ್ಟೊಂದು ದೂರ ಪ್ರಯಾಣಿಸಿದ ಸ್ನೇಹಿತನ ಪ್ರಾಮಾಣಿಕತೆಯನ್ನು ಶ್ಲಾಘಿಸಿತು.
ಸಾಲ ಪಡೆದು ಮರಳಿಸದ ಘಟನೆಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ, 25 ವರ್ಷಗಳ ಬಳಿಕವೂ ಮಾತು ಉಳಿಸಿಕೊಂಡು ಸ್ನೇಹಿತನ ಮನೆ ಬಾಗಿಲಿಗೆ ತೆರಳಿ ಸಾಲ ತೀರಿಸಿದ ಮುಹಮ್ಮದ್ ಇಸ್ಮಾಯಿಲ್ ಅವರ ಕಥೆ ಅನೇಕರಿಗೆ ಸ್ಫೂರ್ತಿದಾಯಕ ಉದಾಹರಣೆಯಾಗಿ ಪರಿಣಮಿಸಿದೆ.