ಜೈಪುರ, ಜು. 11 (DaijiworldNews/AA): ಸರ್ಕಾರಿ ಕೆಲಸಕ್ಕಾಗಿ ಕಾನೂನು ವಿದ್ಯಾರ್ಥಿನಿಯೊಬ್ಬಳು ತನ್ನ ಹೆತ್ತ ತಾಯಿಯನ್ನೇ ಕೊಂದ ದಾರುಣ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ಜೈಪುರ ನ್ಯಾಯಾಲಯದಲ್ಲಿ ಗುಮಾಸ್ತರಾಗಿದ್ದ ನೀರಜ್ ಶರ್ಮಾ, ಕೋರ್ಟ್ ಮಾಸ್ಟರ್ ಆಗಿದ್ದ ತನ್ನ ಪತಿ ವಿಜಯ್ ಶರ್ಮಾ ಅವರು ಸಾವನ್ನಪ್ಪಿದ ನಂತರ ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆದುಕೊಂಡಿದ್ದರು. ವಿಜಯ್ ಶರ್ಮಾ ಅವರು ಕಳೆದ ವರ್ಷ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದರು. ಇದೀಗ ಕಳೆದ ವರ್ಷ ಆಕೆ ತನ್ನ ತಂದೆಯನ್ನೂ ಕೊಂದಿರಬಹುದು ಎಂದು ಆರೋಪಿಯ ತಾಯಿಯ ಸಹೋದರ ಆರೋಪಸಿದ್ದಾರೆ.
ಜುಲೈ 3 ರಂದು ಜೈಪುರದಲ್ಲಿ ನೀರಜ್ ಶರ್ಮಾ ಅವರಿಗೆ ಕಾರೊಂದು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಈ ಅಪಘಾತವನ್ನು ಮಾಡಿಸಿದ್ದು, ನೀರಜ್ ಶರ್ಮಾ ಅವರ ಮಗಳೇ ಎಂಬುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ತಾಯಿಯನ್ನೇ ಕೊಲ್ಲಲು ಸಂಚು ರೂಪಿಸಿದ ಆರೋಪದ ಮೇಲೆ ಪೊಲೀಸರು ಆಕೆಯ ಮಗಳು ಆಯುಷಿಯನ್ನು ಬಂಧಿಸಿದ್ದಾರೆ.
ಅಂತಿಮ ವರ್ಷದ ಎಲ್ಎಲ್ಬಿ ವಿದ್ಯಾರ್ಥಿನಿ ಆಯುಷಿ, ತನ್ನ ಸೋದರಸಂಬಂಧಿ ಬಲರಾಮ್ ಸಹಾಯದಿಂದ 7 ಲಕ್ಷ ರೂ.ಗೆ ಸುಫಾರಿ ಹಂತಕರನ್ನು ನೇಮಿಸಿಕೊಂಡಿದ್ದಳು. ತಾಯಿಯನ್ನು ಕೊಂದು ರಸ್ತೆ ಅಪಘಾತದಂತೆ ಬಿಂಬಿಸುವುದು ಆಕೆಯ ಯೋಜನೆಯಾಗಿತ್ತು. ಆಯುಷಿ ತನ್ನ ತಾಯಿಯನ್ನು ಕೊಂದು ಸರ್ಕಾರಿ ಕೆಲಸ ಪಡೆಯಲು ಬಯಸಿದ್ದಳು ಅಲ್ಲದೇ ಕುಟುಂಬದ ಆಸ್ತಿಯ ಮೇಲೆ ಕಣ್ಣು ಹಾಕಿದ್ದಳು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.