ಮುಂಬೈ, ಜು. 11 (DaijiworldNews/TA): ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಪ್ರವಾಹದ ಭೀಕರತೆ ಮಾನವೀಯತೆಯನ್ನೇ ಕಣ್ಣೀರಾಗಿಸುವ ಘಟನೆಗೆ ಸಾಕ್ಷಿಯಾಗಿದೆ. ಮನೆಯೊಳಗೆ ಮೃತಪಟ್ಟಿದ್ದ ಮಹಿಳೆಯ ಅಂತ್ಯಕ್ರಿಯೆ ನಡೆಸಲು ಸಾಧ್ಯವಾಗದೇ, ಕುಟುಂಬದವರು ಮೃತದೇಹದೊಂದಿಗೆ ಸುಮಾರು ನಾಲ್ಕು ಗಂಟೆಗಳ ಕಾಲ ಮನೆಯ ಮೇಲ್ಛಾವಣಿಯಲ್ಲೇ ಆಶ್ರಯ ಪಡೆದಿರುವ ಮನಕಲಕುವ ಘಟನೆ ಬೆಳಕಿಗೆ ಬಂದಿದೆ.

ಜುಲೈ 6ರಂದು ಪಾಲ್ಘರ್ ಜಿಲ್ಲೆಯ ದೇವಿಪದಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. 55 ವರ್ಷದ ಅನುಸ್ಯ ಮನೋಹರ್ ಲೀಲಕಾ ಅವರು ನಿಧನರಾಗಿದ್ದು, ಕುಟುಂಬಸ್ಥರು ದುಃಖದಲ್ಲಿದ್ದ ವೇಳೆ ಭಾರೀ ಮಳೆಯಿಂದ ಪ್ರವಾಹದ ನೀರು ಮನೆಗೆ ನುಗ್ಗತೊಡಗಿತು. ಕೆಲವೇ ನಿಮಿಷಗಳಲ್ಲಿ ನೀರಿನ ಮಟ್ಟ ಅಪಾಯಕಾರಿಯಾಗಿ ಏರಿದ್ದರಿಂದ ಮನೆಯೊಳಗೆ ಉಳಿಯುವುದು ಅಸಾಧ್ಯವಾಯಿತು. ಜೀವ ಉಳಿಸಿಕೊಳ್ಳುವ ಅನಿವಾರ್ಯತೆಯಿಂದ ಕುಟುಂಬದವರು ಅನುಸ್ಯ ಅವರ ಮೃತದೇಹವನ್ನು ತಮ್ಮೊಂದಿಗೆ ತೆಗೆದುಕೊಂಡು ಮನೆಯ ಮೇಲ್ಛಾವಣಿಗೆ ಏರಿದರು.
ಒಂದೆಡೆ ಆತ್ಮೀಯರ ಅಗಲಿಕೆಯ ನೋವು, ಮತ್ತೊಂದೆಡೆ ಉಕ್ಕಿ ಹರಿಯುತ್ತಿದ್ದ ಪ್ರವಾಹದ ನೀರಿನ ಭೀತಿ, ಈ ಎರಡರ ನಡುವೆ ಕುಟುಂಬದವರು ಸುಮಾರು ನಾಲ್ಕು ಗಂಟೆಗಳ ಕಾಲ ಛಾವಣಿಯ ಮೇಲೆಯೇ ಕಾಲ ಕಳೆಯಬೇಕಾಯಿತು. ಪ್ರವಾಹದ ನೀರು ಇಳಿದ ನಂತರವೇ ಮೃತದೇಹವನ್ನು ಕೆಳಗೆ ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಘಟನೆ ಬಳಿಕ ದೇವಿಪದಾ ಗ್ರಾಮದ ನಿವಾಸಿಗಳು ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರವಾಹದ ವೇಳೆ ಸಕಾಲದಲ್ಲಿ ರಕ್ಷಣಾ ನೆರವು ಸಿಗಲಿಲ್ಲ ಮತ್ತು ಸಂತ್ರಸ್ತ ಕುಟುಂಬಕ್ಕೆ ಇದುವರೆಗೆ ಯಾವುದೇ ನೆರವು ದೊರೆತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.