ತಿರುವನಂತಪುರಂ, ಜು. 11 (DaijiworldNews/AA): ಕೇವಲ ತುಟಿಯ ಮೇಲಾದ ಸಣ್ಣ ಗಾಯಕ್ಕೆ ಹೊಲಿಗೆ ಹಾಕಲು ಅರಿವಳಿಕೆ ನೀಡಿದ ಬೆನ್ನಲ್ಲೇ ಒಂದೂವರೆ ವರ್ಷದ ಮಗುವೊಂದು ಚಿಕಿತ್ಸೆ ಫಲಿಸದೆ ಮೃತಪಟ್ಟ ದಾರುಣ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.

ಮೃತಪಟ್ಟ ಮಗುವನ್ನು ದೇವನ್ಶ್ ಶೌರ್ಯ ಎಂದು ಗುರುತಿಸಲಾಗಿದೆ.
ಜುಲೈ 5 ರಂದು ದೇವನ್ಶ್ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದು, ಕೆಳತುಟಿಗೆ ಸಣ್ಣದೊಂದು ಗಾಯಮಾಡಿಕೊಂಡಿದ್ದ. ಪೋಷಕರು ತಕ್ಷಣವೇ ಮಗುವನ್ನು ಪಯ್ಯನ್ನೂರಿನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗಾಯಕ್ಕೆ ಹೊಲಿಗೆ ಹಾಕಬೇಕೆಂದು ಮಗುವಿಗೆ ವೈದ್ಯರು ಅರಿವಳಿಕೆ ನೀಡಿದ್ದಾರೆ.
ಆದರೆ ಅರಿವಳಿಕೆ ನೀಡಿದ ಕೆಲವೇ ಕ್ಷಣಗಳಲ್ಲಿ ಮಗು ಪ್ರಜ್ಞೆ ಕಳೆದುಕೊಂಡಿದ್ದು, ಸ್ಥಿತಿ ಗಂಭೀರವಾಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಣ್ಣೂರಿನಲ್ಲಿರುವ ಆಸ್ಪತ್ರೆಯ ಮತ್ತೊಂದು ಸುಧಾರಿತ ಘಟಕಕ್ಕೆ ಕರೆದೊಯ್ಯಲಾಗಿತ್ತು. ಆದರೆ ಸತತ ಐದು ದಿನಗಳ ಕಾಲ ವೆಂಟಿಲೇಟರ್ ನಲ್ಲಿದ್ದ ಮಗು, ಚಿಕಿತ್ಸೆ ಫಲಿಸದೆ ಜು.10ರ ರಾತ್ರಿ ಸಾವನ್ನಪ್ಪಿದೆ.
ಮಗುವಿಗೆ ಅರಿವಳಿಕೆಯ ಅತಿಯಾದ ಡೋಸ್ ನೀಡಿದ್ದರಿಂದಲೇ ಮಗುವಿನ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದೆ. ವೈದ್ಯರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಆಸ್ಪತ್ರೆಯ ಅರಿವಳಿಕೆ ತಜ್ಞರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.