ತೆಲಂಗಾಣ, ಜು. 11 (DaijiworldNews/AA): ಪೋಕ್ಸೋ ಪ್ರಕರಣದ ಆರೋಪಿಯೋರ್ವ ತನ್ನ ಪತ್ನಿ, ಇಬ್ಬರು ಮಕ್ಕಳು ಹಾಗೂ ಸಂತ್ರಸ್ತೆ ಸೇರಿದಂತೆ 6 ಜನರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಶನಿವಾರ ಮುಂಜಾನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ತಾಲೂಕಿನಲ್ಲಿ ಸಂಭವಿಸಿದೆ.

ರಾಜ್ಕುಮಾರ್ (28) 6 ಮಂದಿಯನ್ನು ಕೊಲೆಮಾಡಿದ ಆರೋಪಿ.
ಆರೋಪಿಯು ತನ್ನ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣದ ಹಿನ್ನೆಲೆಯಲ್ಲಿ ಕೋಪಗೊಂಡು ತನ್ನ ಪತ್ನಿ, ಇಬ್ಬರು ಮಕ್ಕಳು ಹಾಗೂ ಪೋಕ್ಸೋ ಪ್ರಕರಣದ 17 ವರ್ಷದ ಸಂತ್ರಸ್ತೆಯನ್ನು, ಆಕೆಯ ತಾಯಿ ಮತ್ತು ಅಜ್ಜಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.
ಆರೋಪಿಯು ಸಂತ್ರಸ್ತೆಯ ತಾಯಿ ಮತ್ತು ಅಜ್ಜಿಯನ್ನು ಅವರ ಮನೆಯಲ್ಲಿಯೇ ಕೊಂದು, 17 ವರ್ಷದ ಬಾಲಕಿಯನ್ನು ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಆಕೆಯನ್ನು ಕೊಲೆ ಮಾಡಿದ್ದಾನೆ. ನಂತರ ಅವನು ತನ್ನ ಮನೆಗೆ ಹಿಂತಿರುಗಿ ತನ್ನ ಪತ್ನಿ ಮತ್ತು ಅವರ ಇಬ್ಬರು ಮಕ್ಕಳನ್ನು ಹರಿತವಾದ ಆಯುಧದಿಂದ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ, ಆರೋಪಿಯು ತನ್ನ ಪೋಷಕರಿಗೆ ಕರೆ ಮಾಡಿ ತನ್ನ ಕುಟುಂಬವನ್ನು ಕೊಂದಿರುವುದಾಗಿ ತಿಳಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಮಾಹಿತಿ ಪಡೆದ ನಂತರ, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ಸುಳಿವು ತಂಡಗಳು ಮತ್ತು ಶ್ವಾನ ದಳಗಳು ಸಹ ಸ್ಥಳಕ್ಕೆ ಆಗಮಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿವೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸಲಾಯಿತು. ಇನ್ನು ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈ ಹಿಂದೆ ಆರೋಪಿಯನ್ನು ಬಂಧಿಸಿದ್ದರು. ಆದರೆ ಇತ್ತೀಚೆಗೆ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.