ಬೆಂಗಳೂರು, ಜು. 11 (DaijiworldNews/AA): ನನಗೆ ಬಿಟ್ಟರೆ ರಾಜ್ಯದ ಕೆಎಟಿ ಮತ್ತು ಕೆಪಿಎಸ್ಸಿಯನ್ನೇ ರದ್ದು ಮಾಡುತ್ತೇನೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕೆಪಿಎಸ್ಸಿ ಅಧ್ಯಕ್ಷರ ಪುತ್ರಿಯ ಮೇಲೆ ಎಫ್ಐಆರ್ ದಾಖಲು ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಕಲಿ ಆದಾಯ ಪ್ರಮಾಣ ಪತ್ರದ ದೂರು ಆಗಿದೆ. ನಿನ್ನೆ ರಾತ್ರಿ ಎಫ್ಐಆರ್ ದಾಖಲಾಗಿದೆ. ಕೆಪಿಎಸ್ಸಿ ಸಾಂವಿಧಾನಿಕ ಸಂಸ್ಥೆ. ಅದನ್ನ ಕಾನೂನಾತ್ಮಕವಾಗಿ ಹೇಗೆ ಟ್ಯಾಕಲ್ ಮಾಡಬಹುದು ನೋಡಬೇಕು. ಬೇಲಿನೇ ಎದ್ದು ಹೊಲ ಮೇದರೆ ಏನು ಮಾಡೋದು. ನಮ್ಮ ಕೈಯಲ್ಲಿ ಇಲ್ಲ ಇದು, ನನಗೆ ಇದನ್ನ ಬಿಟ್ಟರೆ ಕೆಎಟಿ ರದ್ದು ಮಾಡ್ತೀನಿ. ಕೆಪಿಎಸ್ಸಿಯನ್ನು ರದ್ದು ಮಾಡ್ತೀನಿ" ಎಂದರು.
"ಇದನ್ನ ಸಂವಿಧಾನಾತ್ಮಕವಾಗಿಯೇ ಮಾಡಬೇಕಾಗುತ್ತದೆ. ಹೊಸ ಕಾನೂನು ತರಬೇಕಾಗುತ್ತದೆ. ಕೆಲವರು ಮಾಡೋಕೆ ಆಗಲ್ಲ ಅಂತಾರೆ. ಕಾನೂನು ಮಾಡೋದು ನಾವು. ಶಾಸನ ಮಾಡೋದು ನಾವು, ನಾವೆಲ್ಲರು ಸೇರಿ ತೀರ್ಮಾನ ಮಾಡಿದ್ರೆ ಶುದ್ದೀಕರಣ ಮಾಡಬಹುದು. ಯುವಕರ ಭವಿಷ್ಯದ ಜೊತೆ ಚೆಲ್ಲಾಟ ಆಡೋದು ಸರಿಯಲ್ಲ" ಎಂದು ವಾಗ್ದಾಳಿ ನಡೆಸಿದರು.
"ಯಾವುದೇ ನಾಯಕರು ಇಲ್ಲದೇ ಹುಬ್ಬಳ್ಳಿ - ಧಾರವಾಡದಲ್ಲಿ ಎಷ್ಟು ಯುವಕರು ಹೋರಾಟ ಮಾಡಿದ್ರಿ ಎಲ್ಲರೂ ನೋಡಿದ್ರಿ. ಇವೆಲ್ಲವನ್ನು ನಿರ್ಲಕ್ಷ್ಯ ಮಾಡಲು ಆಗೊಲ್ಲ. ನಿನ್ನೆ ಎಫ್ಐಆರ್ ದಾಖಲಾಗಿದೆ. ಕೇಸ್ ಸತ್ಯಾಸತ್ಯತೆ ಚೆಕ್ ಮಾಡಿ ಹೇಳಬೇಕಾಗುತ್ತದೆ. ದಾಖಲಾತಿ ನೋಡದೇ ಮಾತಾಡೋದು ಸರಿಯಲ್ಲ. ಸಿಎಂ ಅವರು ನೇಮಕಾತಿ ಮಾಡಬೇಕು ಅಂತ ಹೇಳಿದ್ದಾರೆ. ಇದಕ್ಕೆ ನಾವು ಅವಕಾಶ ಕೊಡಲ್ಲ. ಹಿಂದೆ ಒಂದು ಕಾನೂನು ತಂದಿದ್ದೇವೆ. ಭ್ರಷ್ಟಾಚಾರ ನಿರಂತರ ಮಾಡೋದಕ್ಕೆ. ಇದಕ್ಕೆ ರೂಲ್ಸ್ ಫ್ರೇಮ್ ವಾರ ದಿನಗಳಲ್ಲಿ ನಾನೇ ಮಾಡ್ತೀನಿ" ಎಂದು ತಿಳಿಸಿದರು.
"ಅಧ್ಯಕ್ಷರ ಮೇಲೆ ಕ್ರಮ ರಾಜ್ಯಪಾಲರು ಮಾಡಬೇಕು. ಆದರೆ ಸುದ್ದಿ ಆಗಿರೋದು ನಕಲಿ ಆದಾಯ ಪ್ರಮಾಣ ಪತ್ರ ನಮ್ಮ ವ್ಯಾಪ್ತಿಗೆ ಬರುತ್ತದೆ. ರಾಜ್ಯಪಾಲರು ಏನ್ ಮಾಡ್ತಾರೋ ನೋಡೋಣ. ದಾಖಲಾತಿ ಕೊಡೋದು ನಮ್ಮ ಕೆಲಸ ಕೊಡ್ತೀವಿ. ಅನುಮಾನ ಇದ್ದಾಗ ಆಯೋಗ ಸರಿ ಮಾಡಬೇಕು. ನಾವು ಸಲಹೆ ಕೊಡಬಹುದು. ಈಗ ಆಯೋಗವೇ ಸರಿ ಮಾಡಬೇಕು. ಸದಸ್ಯರೇ ಇದನ್ನ ಮಾಡಿರೋದು. ಅಲ್ಲಿ ಹೊಂದಾಣಿಕೆ, ಪಾರದರ್ಶಕತೆ ಇಲ್ಲ ಅಂತ ಗೊತ್ತಾಗಿದೆ. ಮೋಸ ಇದೆ ಅಂತ ಗೊತ್ತಾಗಿದೆ. ಇದು ಯಾವುದೇ ಸರ್ಕಾರಕ್ಕೆ ಒಳ್ಳೆಯದಲ್ಲ. ಕೇರಳಾದಲ್ಲಿ ಉತ್ತಮವಾಗಿ ನಡೆಯುತ್ತಿದೆ. ಮುಂದೆ ಏನ್ ಮಾಡೋಣ ಅಂತ ನೋಡೋಣ" ಎಂದು ಅಭಿಪ್ರಾಯಪಟ್ಟರು.