ತಿರುವನಂತಪುರಂ, ಜು. 11 (DaijiworldNews/TA): 'ದೇವರ ಸ್ವಂತ ನಾಡು' ಎಂದೇ ಪ್ರಸಿದ್ಧವಾಗಿರುವ ಕೇರಳ ಮತ್ತೊಮ್ಮೆ ಭೂಕುಸಿತದ ಭೀತಿಯಿಂದ ತತ್ತರಿಸಿದೆ. ಕಳೆದ ಎರಡು ವರ್ಷಗಳ ಹಿಂದೆ ವಯನಾಡಿನಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತದ ನೋವು ಇನ್ನೂ ಮಾಸುವ ಮುನ್ನವೇ ಮತ್ತೆ ಅದೇ ಪ್ರದೇಶದಲ್ಲಿ ಪ್ರಕೃತಿ ರೌದ್ರಾವತಾರ ತೋರಿದೆ. ಈ ಬೆಳವಣಿಗೆಯ ನಡುವೆ, ವಯನಾಡಿನಲ್ಲಿ ಆಗಾಗ ಸಂಭವಿಸುತ್ತಿರುವ ಭೂಕುಸಿತಗಳಿಗೆ ಕೇವಲ ಭಾರೀ ಮಳೆಯಷ್ಟೇ ಅಲ್ಲ, ಅನಿಯಂತ್ರಿತ ಪ್ರವಾಸೋದ್ಯಮ, ಅಕ್ರಮ ರೆಸಾರ್ಟ್ಗಳು ಮತ್ತು ಪರಿಸರ ವಿರೋಧಿ ನಿರ್ಮಾಣ ಚಟುವಟಿಕೆಗಳೂ ಪ್ರಮುಖ ಕಾರಣಗಳಾಗಿವೆ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ವಯನಾಡು ಸೇರಿದಂತೆ ಕೇರಳದ ಗುಡ್ಡಗಾಡು ಪ್ರದೇಶಗಳಲ್ಲಿ ಕಳೆದ ಕೆಲವು ವರ್ಷಗಳಿಂದ ರೆಸಾರ್ಟ್ಗಳು, ಹೋಂಸ್ಟೇಗಳು ಮತ್ತು ಪ್ರವಾಸಿ ತಾಣಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಬೆಟ್ಟಗಳ ಇಳಿಜಾರು ಪ್ರದೇಶಗಳಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ನಿರ್ಮಾಣ ಕಾರ್ಯಗಳು ಮಣ್ಣಿನ ನೈಸರ್ಗಿಕ ಸ್ಥಿರತೆಯನ್ನು ದುರ್ಬಲಗೊಳಿಸುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರೆಸಾರ್ಟ್ ನಿರ್ಮಾಣಕ್ಕಾಗಿ ಬೆಟ್ಟಗಳನ್ನು ಕತ್ತರಿಸುವುದು, ಮರಗಳನ್ನು ತೆರವುಗೊಳಿಸುವುದು ಮತ್ತು ನೈಸರ್ಗಿಕ ನೀರು ಹರಿಯುವ ಮಾರ್ಗಗಳನ್ನು ಬದಲಾಯಿಸುವುದರಿಂದ ಮಳೆಯ ನೀರು ಮಣ್ಣಿನೊಳಗೆ ಹೆಚ್ಚು ಪ್ರಮಾಣದಲ್ಲಿ ಸೇರಿ, ಭೂಕುಸಿತದ ಅಪಾಯವನ್ನು ಹೆಚ್ಚಿಸುತ್ತದೆ.
ಅರಣ್ಯ ಪ್ರದೇಶಗಳು ಮಣ್ಣನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವ ನೈಸರ್ಗಿಕ ರಕ್ಷಣಾ ವ್ಯವಸ್ಥೆಯಾಗಿವೆ. ಆದರೆ ವಯನಾಡಿನಲ್ಲಿ ಕಳೆದ ಹಲವು ದಶಕಗಳಲ್ಲಿ ಅರಣ್ಯ ಪ್ರದೇಶವು ಗಣನೀಯವಾಗಿ ಕುಸಿದಿದ್ದು, ಅದರ ಬದಲಿಗೆ ತೋಟಗಳು ಹಾಗೂ ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗಿವೆ. ಮರಗಳ ಬೇರುಗಳ ಕೊರತೆಯಿಂದ ಮಣ್ಣು ಸುಲಭವಾಗಿ ಸಡಿಲಗೊಳ್ಳುತ್ತಿದ್ದು, ಭಾರೀ ಮಳೆಯ ವೇಳೆ ಬೆಟ್ಟಗಳು ಕುಸಿಯುವ ಸಾಧ್ಯತೆ ಹೆಚ್ಚುತ್ತಿದೆ. ಗುಡ್ಡಗಳ ಇಳಿಜಾರು ಪ್ರದೇಶಗಳಲ್ಲಿ ನಿರ್ಮಾಣವಾಗುತ್ತಿರುವ ರೆಸಾರ್ಟ್ಗಳು, ಗ್ಲಾಸ್ ಬ್ರಿಜ್ಗಳು ಹಾಗೂ ಇತರ ಕಟ್ಟಡಗಳು ಬೆಟ್ಟಗಳ ಮೇಲಿನ ಒತ್ತಡವನ್ನು ಹೆಚ್ಚಿಸುತ್ತಿವೆ. ಜೊತೆಗೆ ನೈಸರ್ಗಿಕ ಒಳಚರಂಡಿ ಮತ್ತು ನೀರು ಹರಿಯುವ ವ್ಯವಸ್ಥೆ ಅಸ್ತವ್ಯಸ್ತವಾಗುತ್ತಿರುವುದರಿಂದ ಮಳೆಯ ನೀರು ಮಣ್ಣಿನಲ್ಲಿ ಸಂಗ್ರಹವಾಗಿ ಭೂಕುಸಿತಕ್ಕೆ ಕಾರಣವಾಗುತ್ತಿದೆ.
ಸರ್ಕಾರಿ ದಾಖಲೆಗಳಲ್ಲಿ ವಯನಾಡಿನಲ್ಲಿ ಅತಿ ಕಡಿಮೆ ಸಂಖ್ಯೆಯ ರೆಸಾರ್ಟ್ಗಳಿದ್ದರೂ, ವಿವಿಧ ಆನ್ಲೈನ್ ಪ್ರವಾಸೋದ್ಯಮ ವೇದಿಕೆಗಳಲ್ಲಿ ಸಾವಿರಾರು ರೆಸಾರ್ಟ್ ಹಾಗೂ ಹೋಂಸ್ಟೇಗಳ ಮಾಹಿತಿ ಲಭ್ಯವಿದೆ. ಪರಿಸರ, ಅರಣ್ಯ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಪಾಲಿಸದೆ ಹಲವಾರು ಕಟ್ಟಡಗಳು ನಿರ್ಮಾಣವಾಗಿರುವ ಆರೋಪಗಳೂ ಕೇಳಿಬರುತ್ತಿವೆ. ವಯನಾಡು ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸೋದ್ಯಮದ ಬೇಡಿಕೆ ಹೆಚ್ಚಿದಂತೆ ಹೊಸ ರಸ್ತೆಗಳು, ಸೇತುವೆಗಳು, ವಾಹನ ನಿಲುಗಡೆ ಸ್ಥಳಗಳು ಹಾಗೂ ವಸತಿ ಸೌಲಭ್ಯಗಳ ನಿರ್ಮಾಣಕ್ಕಾಗಿ ಬೆಟ್ಟಗಳನ್ನು ವ್ಯಾಪಕವಾಗಿ ಕತ್ತರಿಸಲಾಗುತ್ತಿದೆ. ಇದು ಪರಿಸರದ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡುತ್ತಿದೆ.
ತಜ್ಞರ ಪ್ರಕಾರ, ಕೇರಳದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತಿವೃಷ್ಟಿ, ಅಲ್ಪಾವಧಿಯಲ್ಲಿ ಅಧಿಕ ಮಳೆ ಹಾಗೂ ಕ್ಲೌಡ್ಬರ್ಸ್ಟ್ನಂತಹ ಹವಾಮಾನ ವೈಪರೀತ್ಯಗಳು ಹೆಚ್ಚುತ್ತಿವೆ. ಮಣ್ಣಿನಲ್ಲಿ ನೀರಿನ ಪ್ರಮಾಣ ಹೆಚ್ಚಾದಾಗ ಬೆಟ್ಟಗಳ ಸ್ಥಿರತೆ ಕುಸಿದು ಭೂಕುಸಿತ ಸಂಭವಿಸುವ ಸಾಧ್ಯತೆ ಮತ್ತಷ್ಟು ಹೆಚ್ಚುತ್ತದೆ. ವಯನಾಡು ಮಾತ್ರವಲ್ಲದೆ, ಇಡುಕ್ಕಿ, ಕೊಟ್ಟಾಯಂ ಸೇರಿದಂತೆ ಪಶ್ಚಿಮ ಘಟ್ಟದ ಹಲವು ಪ್ರದೇಶಗಳಲ್ಲಿಯೂ ಇದೇ ರೀತಿಯ ಅಪಾಯ ಎದುರಾಗುತ್ತಿದೆ. ಪರಿಸರ ತಜ್ಞರ ಪ್ರಕಾರ, ಅರಣ್ಯ ಸಂರಕ್ಷಣೆ, ಪರಿಸರ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನ ಹಾಗೂ ಅವೈಜ್ಞಾನಿಕ ನಿರ್ಮಾಣಗಳಿಗೆ ಕಡಿವಾಣ ಹಾಕದೆ ಹೋದರೆ ಭವಿಷ್ಯದಲ್ಲಿ ಇಂತಹ ದುರಂತಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.