ನವದೆಹಲಿ, ಜು. 10 (DaijiworldNews/AK):ನನ್ನನ್ನು ಬಂಧಿಸಬಹುದು ಅಥವಾ ಕೊಲ್ಲಬಹುದು, ಯಾವುದಕ್ಕೂ ನಾನು ಹೆದರುವುದಿಲ್ಲ. ಇದೇ ಮುಂಬರುವ ಡಿಸೆಂಬರ್ನಲ್ಲಿ ನಾನು ನನ್ನ ಪಕ್ಷದ ಸಹೋದ್ಯೋಗಿಗಳೊಂದಿಗೆ ತಾಯ್ನಾಡಿಗೆ ಮರಳಲಿದ್ದೇನೆ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.

ಬಾಂಗ್ಲಾದೇಶದಲ್ಲಿಸದ್ಯ ತೀವ್ರ ರಾಜಕೀಯ ಬಿಕ್ಕಟ್ಟು ಹಾಗೂ ಅವರ ವಿರುದ್ಧ ಕಾನೂನು ಕ್ರಮಗಳ ತೂಗುಗತ್ತಿ ಇದ್ದಾಗಲೂ ಶೇಖ್ ಹಸೀನಾ ತಾಯ್ನಾಡಿಗೆ ಮರಳುವ ದೃಢ ನಿರ್ಧಾರ ಪ್ರಕಟಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಾಂಗ್ಲಾದೇಶಕ್ಕೆ ಹೋದರೆ ನನ್ನನ್ನು ಜೈಲಿಗೆ ಹಾಕಬಹುದು ಅಥವಾ ಜೀವಕ್ಕೇ ಅಪಾಯ ಉಂಟಾಗಬಹುದು ಎಂಬ ಅರಿವು ನನಗಿದೆ. ಆದರೂ ನಾನು ಡಿಸೆಂಬರ್ನಲ್ಲಿ ಬಾಂಗ್ಲಾಕ್ಕೆ ಹೋಗುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಪ್ರಸ್ತುತ ಇರುವ ಮಧ್ಯಂತರ ಸರ್ಕಾರದ ವಿರುದ್ಧ ತಮ್ಮ ರಾಜಕೀಯ ಹೋರಾಟವನ್ನು ಮತ್ತೆ ಆರಂಭಿಸುವ ಮುನ್ಸೂಚನೆ ನೀಡಿದ್ದಾರೆ. ನನ್ನ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ನನ್ನ ಸಾವು ಬಂದರೆ ಅದು ನನ್ನ ಸ್ವಂತ ನೆಲದಲ್ಲಿ ಆಗಬೇಕು. ನನ್ನ ಹೆತ್ತವರನ್ನು ಸಮಾಧಿ ಮಾಡಿದ ಮತ್ತು ಅವರ ರಕ್ತ ಚೆಲ್ಲಿದ ಸ್ಥಳದಲ್ಲಿ ಬರಬೇಕೆಂದು ನಾನು ಬಯಸುತ್ತೇನೆ ಎಂದು ಅವರು ಹೇಳಿದರು.
ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಶೇಖ್ ಹಸೀನಾ ಅವರಿಗೆ ಮರಣದಂಡನೆ ವಿಧಿಸಿದೆ.