ಬೆಂಗಳೂರು, ಜು. 10 (DaijiworldNews/TA): ನಗರದ ಹೊರವಲಯದಲ್ಲಿ ಕೋಟ್ಯಂತರ ರೂಪಾಯಿ ನಗದು ಸಾಗಿಸುತ್ತಿದ್ದ ಎಟಿಎಂ ಕ್ಯಾಶ್ ವ್ಯಾನ್ನ್ನು ಗುರಿಯಾಗಿಸಿಕೊಂಡು ದರೋಡೆ ನಡೆಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಬನ್ನೇರುಘಟ್ಟ–ಜಿಗಣಿ ಮುಖ್ಯರಸ್ತೆಯಲ್ಲಿ ಬುಧವಾರ ರಾತ್ರಿ ನಡೆದ ಈ ಘಟನೆ ಸಿಸಿಟಿವಿ ಹಾಗೂ ಸ್ಥಳೀಯರ ವಿಡಿಯೊಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಾಹಿತಿಯ ಪ್ರಕಾರ, ವಿವಿಧ ಎಟಿಎಂ ಕೇಂದ್ರಗಳಿಗೆ ಹಣ ತುಂಬಲು ಸುಮಾರು ರೂ. 1.79 ಕೋಟಿ ನಗದು ಹೊತ್ತೊಯ್ಯುತ್ತಿದ್ದ ವಾಹನದಲ್ಲಿ ಚಾಲಕ, ಗನ್ಮ್ಯಾನ್ ಹಾಗೂ ನಗದು ನಿರ್ವಹಣಾ ಸಿಬ್ಬಂದಿ ಇದ್ದರು. ಈ ವೇಳೆ ಬನ್ನೇರುಘಟ್ಟ–ಜಿಗಣಿ ರಸ್ತೆಯಲ್ಲಿ ವ್ಯಾನ್ ಯೂ-ಟರ್ನ್ ಪಡೆಯುತ್ತಿದ್ದಾಗ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ವಾಹನದ ದಾರಿಯನ್ನು ಅಡ್ಡಗಟ್ಟಿದ್ದಾರೆ. "ನಿಮ್ಮ ವಾಹನ ನಮ್ಮ ಬೈಕ್ಗೆ ಡಿಕ್ಕಿ ಹೊಡೆದಿದೆ" ಎಂದು ಜಗಳ ಆರಂಭಿಸಿದ ಆರೋಪಿಗಳು, ವಾಹನದಲ್ಲಿದ್ದ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಲು ಯತ್ನಿಸಿದ್ದಾರೆ. ಗದ್ದಲದ ಸದ್ದಿಗೆ ಸ್ಥಳೀಯರು ಹಾಗೂ ಇತರ ವಾಹನ ಸವಾರರು ಸ್ಥಳಕ್ಕೆ ಜಮಾಯಿಸುತ್ತಿದ್ದಂತೆ ದುಷ್ಕರ್ಮಿಗಳ ಯೋಜನೆ ಹಿನ್ನಡೆಯಾಗಿದೆ.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಆರೋಪಿಗಳು, ಎಟಿಎಂ ಕ್ಯಾಶ್ ವ್ಯಾನ್ನ ಕೀಲಿಯನ್ನು ಚಾಲಕನಿಂದ ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ವಾಹನವನ್ನು ಅಲ್ಲಿಯೇ ಸ್ಥಗಿತಗೊಳಿಸಿ ಸಿಬ್ಬಂದಿಯನ್ನು ಅಸಹಾಯಕರನ್ನಾಗಿ ಮಾಡಿ ಬಳಿಕ ನಗದು ದೋಚುವುದು ಅವರ ಮೂಲ ಉದ್ದೇಶವಾಗಿತ್ತು ಎಂದು ಶಂಕಿಸಲಾಗಿದೆ. ಸ್ಥಳೀಯರ ಸಕಾಲಿಕ ಆಗಮನದಿಂದ ಕೋಟ್ಯಂತರ ರೂಪಾಯಿ ನಗದು ಸುರಕ್ಷಿತವಾಗಿದ್ದು, ಸಂಭವಿಸಬಹುದಾಗಿದ್ದ ಭಾರೀ ದರೋಡೆ ತಪ್ಪಿದಂತಾಗಿದೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ಯಾಶ್ ವ್ಯಾನ್ನ ಕೀಲಿ ಕಸಿದುಕೊಂಡು ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಸಿಸಿಟಿವಿ ದೃಶ್ಯಗಳು ಹಾಗೂ ಇತರ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಪ್ರಕರಣದ ಎಲ್ಲ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದಾರೆ.