ಉತ್ತರ ಪ್ರದೇಶ, ಜು. 10 (DaijiworldNews/AA): ಯುಪಿಎಸ್ಸಿ ಪರೀಕ್ಷೆಯಲ್ಲಿನ ಯಶಸ್ಸು ಹಲವು ವರ್ಷಗಳ ಪರಿಶ್ರಮದ ಫಲವಾಗಿರುತ್ತದೆ. ಇದಕ್ಕೆ ಆಸ್ಥಾ ಜೈನ್ ಅವರ ಕಥೆಯೇ ಸಾಕ್ಷಿಯಾಗಿದೆ.

ಆಸ್ಥಾ ಜೈನ್ ಅವರು ಉತ್ತರ ಪ್ರದೇಶದ ಕಾಂಡ್ಲಾದಂತಹ ಸಣ್ಣ ಪಟ್ಟಣದ ದಿನಸಿ ಅಂಗಡಿಯ ಮಾಲೀಕರ ಮಗಳು, ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 9ನೇ ರ್ಯಾಂಕ್ ಗಳಿಸುವ ಮೂಲಕ ಐಎಎಸ್ ಸೇರುವ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಆಸ್ಥಾ ಅವರ ತಂದೆ ಅಜಯ್ ಕುಮಾರ್ ಜೈನ್ ಸಣ್ಣ ದಿನಸಿ ಅಂಗಡಿ ನಡೆಸುತ್ತಿದ್ದಾರೆ ಮತ್ತು ತಾಯಿ ಮಮತಾ ಜೈನ್ ಗೃಹಿಣಿ. ಆರ್ಥಿಕವಾಗಿ ಸಾಮಾನ್ಯ ಹಿನ್ನೆಲೆಯವರಾಗಿದ್ದರೂ, ತಮ್ಮ ನಾಲ್ವರು ಮಕ್ಕಳಿಗೂ ಸಮಾನ ಶಿಕ್ಷಣ ನೀಡುವಲ್ಲಿ ಪೋಷಕರು ಯಾವುದೇ ಕೊರತೆ ಮಾಡಿರಲಿಲ್ಲ.
ಆಸ್ಥಾ ತಮ್ಮ ಮೂರನೇ ಪ್ರಯತ್ನದಲ್ಲಿ ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಷೇಶವೆಂದರೆ ಹೈದರಾಬಾದ್ನಲ್ಲಿ ಐಪಿಎಸ್ ತರಬೇತಿ ಪಡೆಯುತ್ತಿರುವಾಗಲೇ ಅವರು ಈ ಸಾಧನೆ ಮಾಡಿದ್ದಾರೆ. ತಮ್ಮ ರ್ಯಾಂಕ್ ಸುಧಾರಿಸಿಕೊಳ್ಳುವ ಮತ್ತು ಐಎಎಸ್ ಅಧಿಕಾರಿ ಆಗುವ ಗುರಿಯೊಂದಿಗೆ, ತರಬೇತಿಯ ನಡುವೆಯೂ ಬಿಡುವು ಪಡೆದು ಮತ್ತೆ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದರು. ಆರಂಭದಲ್ಲಿ ದೆಹಲಿಯಲ್ಲಿ ಕೋಚಿಂಗ್ ಪಡೆದಿದ್ದ ಆಸ್ಥಾ, ನಂತರ ಸ್ವಯಂ ಅಧ್ಯಯನ ಮತ್ತು ಆನ್ಲೈನ್ ಸಂಪನ್ಮೂಲಗಳನ್ನು ಬಳಸಿಕೊಂಡರು. ಅವರ ಶಿಸ್ತುಬದ್ಧ ಸಿದ್ಧತೆ ಮತ್ತು ತರಬೇತಿಯ ಜೊತೆಗೆ ಅಧ್ಯಯನವನ್ನು ಸಮತೋಲನಗೊಳಿಸುವ ಸಾಮರ್ಥ್ಯವೇ ಈ ಯಶಸ್ಸಿಗೆ ಕಾರಣವಾಯಿತು.