ಚಿಕ್ಕಬಳ್ಳಾಪುರ, ಜು. 09 (DaijiworldNews/TA): ಚಿಕ್ಕಬಳ್ಳಾಪುರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ 11ನೇ ಮೈಲಿ ಸಮೀಪ ಪೆಟ್ರೋಲ್ ಟ್ಯಾಂಕರ್ ಲಾರಿಯೊಂದು ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಪರಿಣಾಮ ಮತ್ತೊಂದು ಹಾಲಿನ ಟ್ಯಾಂಕರ್ಗೂ ಬೆಂಕಿ ವ್ಯಾಪಿಸಿದ ಘಟನೆ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಅತಿ ವೇಗದಲ್ಲಿ ಸಂಚರಿಸುತ್ತಿದ್ದ ಪೆಟ್ರೋಲ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಲಾರಿ ಕ್ಷಣಾರ್ಧದಲ್ಲೇ ಬೆಂಕಿಗಾಹುತಿಯಾಗಿದೆ. ಇದೇ ವೇಳೆ ಸಮೀಪದಲ್ಲಿ ರಿವರ್ಸ್ ತೆಗೆಯುತ್ತಿದ್ದ ಹಾಲಿನ ಟ್ಯಾಂಕರ್ಗೂ ಬೆಂಕಿ ವ್ಯಾಪಿಸಿದ್ದು, ಎರಡೂ ವಾಹನಗಳು ಹೊತ್ತಿ ಉರಿದಿವೆ. ಅದೃಷ್ಟವಶಾತ್ ಎರಡೂ ಲಾರಿಗಳ ಚಾಲಕರು ಸಮಯಪ್ರಜ್ಞೆ ಮೆರೆದು ವಾಹನಗಳಿಂದ ಹೊರಗೆ ಹಾರಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಆದರೆ ಬೆಂಕಿಯ ತೀವ್ರತೆಗೆ ಎರಡೂ ಲಾರಿಗಳು ಬಹುತೇಕ ಸುಟ್ಟು ಭಸ್ಮವಾಗಿವೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣವೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.