ವಯನಾಡು, ಜು. 09 (DaijiworldNews/AK): ಮೆಪ್ಪಾಡಿಯ ಕಲ್ಲಾಡಿ ಬಳಿ ಸುರಂಗ ರಸ್ತೆ ಕಾಮಗಾರಿ ಸ್ಥಳದಲ್ಲಿ ಗುಡ್ಡಕುಸಿದು ಸಾವನ್ನಪ್ಪಿದ ಮೂವರ ಗುರುತು ಪತ್ತೆಯಾಗಿದೆ. ಇನ್ನೂ ಐವರು ಕಣ್ಮರೆಯಾಗಿದ್ದಾರೆ ಎಂದು ಕೇರಳ ಡಿಸಿ ಮೇಘಶ್ರೀ ಮಾಹಿತಿ ನೀಡಿದ್ದಾರೆ.

ಮೃತರನ್ನು ಮಧ್ಯಪ್ರದೇಶದ ಜೆಸಿಬಿ ಆಪರೇಟರ್ ಚಂದ್ರಬಾನ್, ಬಿಹಾರದ ಬಿಕಾಶ್ ಕುಮಾರ್ ಹಾಗೂ ಜಾರ್ಖಂಡ್ ಕಾರ್ಮಿಕ ಅನ್ಮೋಲ್ ಎಂದು ಗುರುತಿಸಲಾಗಿದೆ.
ಇನ್ನೂ ಹಿಮಾಚಲದ ನಿರ್ಮಾಣ ವ್ಯವಸ್ಥಾಪಕ ವಿಕ್ರಮ್ ರಾಣಾ, ಎಂಜಿನಿಯರ್ ರಾಹುಲ್, ಬಿಹಾರದ ಇಟಾಚಿ ನಿರ್ವಾಹಕ ಮೊಹಮ್ಮದ್ ಇಮ್ರಾನ್, ಬಂಗಾಳದ ಸರ್ವೇಯರ್ ರಾಕೇಶ್ ಗುಚೈತ್ ಹಾಗೂ ಉತ್ತರ ಪ್ರದೇಶದ ಸರ್ವೇಯರ್ ಅಜರುದ್ದೀನ್ ಅನ್ಸಾರಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಭೂಕುಸಿತ ದುರಂತದ ಸಂಬಂಧ ಅಸಹಜ ಕೇಸ್ ದಾಖಲು ಮಾಡಲಾಗಿದೆ.
ನಾಪತ್ತೆಯಾಗಿರುವ ಐವರಿಗಾಗಿ ಎಸ್ಡಿಆರ್ಎಫ್, ಎನ್ಡಿಆರ್ಎಫ್ ಸೇರಿ 200ಕ್ಕೂ ಹೆಚ್ಚು ಸಿಬ್ಬಂದಿಯಿಂದ ಬಿರುಸಿನ ಶೋಧ ಕಾರ್ಯ ನಡೆಯುತ್ತಿದೆ. ನಿರಂತರವಾಗಿ ಮಳೆಯಾಗ್ತಿದ್ದು, ಕಾರ್ಯಾಚರಣೆಗೂ ಅಡ್ಡಿಯಾಗುತ್ತಿದೆ. ಆದರೆ, ಘಟನೆ ನಡೆದು ಒಂದೇ ದಿನ ಆಗಿರುವುದರಿಂದ ನಾಪತ್ತೆಯಾದವರು ಸಿಗೋದು ಬಹುತೇಕ ಅನುಮಾನ ಎನ್ನಲಾಗಿದೆ.
ಗುಡ್ಡಜಾರಿ ಬಂದಾಗ ಜೊತೆಯಲ್ಲೇ ಜಾರಿದ್ದ ವಾಟರ್ ಟ್ಯಾಂಕರ್ನಿಂದ ಹಲವರ ಜೀವ ಉಳಿದಿದೆ. ಈ ವಾಟರ್ ಟ್ಯಾಂಕರ್ ಕರ್ನಾಟಕದ ರಾಮನಗರದ ನೋಂದಣಿ ಹೊಂದಿದೆ. ಈ ಮಧ್ಯೆ, ಮೇಪ್ಪಾಡಿ ಸುತ್ತಲೂ ಭೂಮಿ ಕುಸಿಯುವ ಆತಂಕ ಹೆಚ್ಚಾದ ಹಿನ್ನೆಲೆ ಕಲ್ಲಾಡಿ ಆಸುಪಾಸಿನ 23 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.