ಬೆಂಗಳೂರು,ಜು. 08 (DaijiworldNews/AK): ಸಿ.ಟಿ. ರವಿ ಅವರು ಮೊದಲು ತಮ್ಮ ವಾಯ್ಸ್ ಸ್ಯಾಂಪಲ್ ನೀಡಿ, ಆ ಬಳಿಕ ಬೇರೆಯವರ ಬಗ್ಗೆ ಮಾತನಾಡಲಿ ಎಂದು ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಖಾರವಾಗಿ ತಿರುಗೇಟು ನೀಡಿದ್ದಾರೆ.

ತೇಜಸ್ ಗೌಡ ಅವರ ಮನೆಗೆ ಗೃಹ ಸಚಿವರೇ ಪೊಲೀಸರನ್ನು ಕಳುಹಿಸಿ ಬೆದರಿಕೆ ಹಾಕಿಸಿದ್ದಾರೆ ಎಂಬ ಸಿ.ಟಿ. ರವಿ ಅವರ ಆರೋಪಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಬಿಜೆಪಿಯ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸಿ.ಟಿ. ರವಿ, ಪ್ರಹ್ಲಾದ್ ಜೋಶಿ ಅವರಂತಹ ನಾಯಕರು ಕೇವಲ ಮಾಧ್ಯಮಗಳ ಮುಂದೆ ಬಂದು ಆರೋಪ ಮಾಡುವುದನ್ನು ಬಿಟ್ಟು, ಅಧಿಕೃತವಾಗಿ ದೂರು ದಾಖಲಿಸಲಿ. ಯಾವ ಅಧಿಕಾರಿ ಹೋಗಿ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದರೆ, ನಾನು ಖಂಡಿತವಾಗಿಯೂ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.
ಬೆದರಿಕೆ ಹಾಕಲು ನಾನೇ ಪೊಲೀಸರನ್ನು ಕಳುಹಿಸಿದ್ದೇನೆ ಎಂದು ಅವರ ಬಳಿ ಆಧಾರವಿದ್ದರೆ, ಮೊದಲು ನನ್ನ ಮೇಲೆಯೇ ದೂರು ಕೊಡಲಿ. ಅತ್ಯಂತ ಪಾರದರ್ಶಕವಾಗಿ ನನ್ನ ವಿರುದ್ಧವೇ ನಾನು ತನಿಖೆ ಮಾಡಿಸಿಕೊಳ್ಳಲು ಸಿದ್ಧನಿದ್ದೇನೆ. ಬೇಕಿದ್ದರೆ ಇದಕ್ಕಾಗಿ ಒಂದು ವಿಶೇಷ ಸಮಿತಿ ರಚಿಸಿ, ಅದಕ್ಕೆ ಸಿ.ಟಿ. ರವಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡುತ್ತೇನೆ ಎಂದು ಸವಾಲು ಹಾಕಿದರು.
ತಮ್ಮದೇ ಒಂದು ವಾಯ್ಸ್ ಸ್ಯಾಂಪಲ್ ಕೊಡಲು ಸಾಧ್ಯವಾಗದ ವ್ಯಕ್ತಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಧ್ವನಿ ಮಾದರಿ ನೀಡಲು ಒಪ್ಪದೆ ಸುಪ್ರೀಂ ಕೋರ್ಟ್ಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಇಂತಹವರು ಯಾವ ಪುರುಷಾರ್ಥಕ್ಕೆ ಮಾತನಾಡುತ್ತಾರೆ? ಮೊದಲು ಸಿ.ಟಿ. ರವಿ ತಮ್ಮ ವಾಯ್ಸ್ ಸ್ಯಾಂಪಲ್ ಕೊಡಲಿ, ಆಮೇಲೆ ಮಾತನಾಡಲಿ ಎಂದು ಕಿಡಿಕಾರಿದರು.