ಹೈದರಾಬಾದ್, ಜು. 08 (DaijiworldNews/AA): 'ಬಾಲಾಮೃತಂ' ಯೋಜನೆಯಡಿ ನರ್ಸರಿಯಿಂದ 12ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟವನ್ನು ನೀಡಲಾಗುತ್ತದೆ ಎಂದು ತೆಲಂಗಾಣ ಸಿಎಂ ಎ. ರೇವಂತ್ ರೆಡ್ಡಿ ಘೋಷಣೆ ಮಾಡಿದ್ದಾರೆ.

'ಬಾಲಾಮೃತಂ' ಯೋಜನೆಯ ಹೊಸ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಇದು ಅಭಿವೃದ್ಧಿ ಹೊಂದಿದ ಮತ್ತು ಆರೋಗ್ಯಕರ ತೆಲಂಗಾಣವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಇಟ್ಟಿರುವ ಒಂದು ಹೆಜ್ಜೆಯಾಗಿದೆ. ಬಡ ಕುಟುಂಬಗಳ ಪೋಷಕರು ಮುಂಜಾನೆ ಬೇಗ ಎದ್ದು ಕೆಲಸಕ್ಕೆ ತೆರಳುವುದರಿಂದ, ಮಕ್ಕಳಿಗೆ ಉಪಾಹಾರ ತಯಾರಿಸಲು ತಾಯಂದಿರಿಗೆ ಸಾಕಷ್ಟು ಸಮಯ ಸಿಗುವುದಿಲ್ಲ. ಈ ಕಾರಣದಿಂದಾಗಿ ಬಾಲಾಮೃತಂ ಯೋಜನೆ ಪರಿಚಯಿಸಲಾಗಿದೆ" ಎಂದು ತಿಳಿಸಿದರು.
"ರಾಜ್ಯ ಸರ್ಕಾರವು ಶಿಕ್ಷಣಕ್ಕಾಗಿ ವಾರ್ಷಿಕ ಸುಮಾರು 27,000 ಕೋಟಿ ರೂ. ವೆಚ್ಚ ಮಾಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಮತ್ತು ಶೈಕ್ಷಣಿಕ ಗುಣಮಟ್ಟವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಿಸಮನಾಗಿ ಮೇಲ್ದರ್ಜೆಗೇರಿಸಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ" ಎಂದು ಹೇಳಿದರು.
"ಶಿಕ್ಷಣದ ಮೇಲಿನ ವೆಚ್ಚವನ್ನು ಒಂದು ಹೂಡಿಕೆ ಎಂದು ಪರಿಗಣಿಸುತ್ತಿರುವುದರಿಂದ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು ನಮ್ಮ ಗುರಿಯಾಗಿದೆ. ನಾವು ಇಂತಹ ಯೋಜನೆಗಳನ್ನು ವೋಟ್ ಬ್ಯಾಂಕ್ಗಾಗಿ ಪರಿಚಯಿಸುತ್ತಿಲ್ಲ, ಬದಲಿಗೆ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಪರಿಚಯಿಸುತ್ತಿದ್ದೇವೆ" ಎಂದರು.