ಶ್ರೀನಗರ, ಜು. 08 (DaijiworldNews/AA): ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಉಗ್ರರ ವಿರುದ್ಧದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದೀಗ ದಕ್ಷಿಣ ಕಾಶ್ಮೀರದ ಮಿಮಂದರ್ ಪ್ರದೇಶದ ದಟ್ಟ ತೋಟವೊಂದರಲ್ಲಿ ಅಡಗಿದ್ದ ಶಂಕಿತ ಲಷ್ಕರ್-ಎ-ತೊಯ್ಬಾ ಉಗ್ರನನ್ನು ಭದ್ರತಾ ಪಡೆಗಳು ಎನ್ಕೌಂಟರ್ನಲ್ಲಿ ಹೊಡೆದುರುಳಿಸಿವೆ.

ಐದು ದಿನಗಳ ಹಿಂದೆ ದಟ್ಟ ತೋಟವೊಂದರಲ್ಲಿ ಲಷ್ಕರ್ ಕಮಾಂಡರ್ ಜಾಕಿರ್ ಗನಾಯಿ ಮತ್ತು ಆತನ ಸಹಚರ ಲತೀಫ್ ಭಟ್ ಅಡಗಿರುವ ಮಾಹಿತಿ ಗುಪ್ತಚರ ಇಲಾಖೆಗೆ ಲಭ್ಯವಾಗಿತ್ತು. ಇಬ್ಬರು ಉಗ್ರರು ಸೈದ್ಪೋರಾದ ಛನ್ನಾಪೋರಾ ಪ್ರದೇಶದಲ್ಲಿ ಚಲನವಲನ ನಡೆಸುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳ ಆಧಾರದ ಮೇಲೆ ಅಡಗಿರುವ ಉಗ್ರರಿಗಾಗಿ ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರಿದು ಬಿಗಿ ಕಾರ್ಯಾಚರಣೆ ಕೈಗೊಂಡಿದ್ದವು.
ಕಾರ್ಯಾಚರಣೆ ವೇಳೆ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಓರ್ವ ಉಗ್ರನನ್ನು ಹೊಡೆದುರುಳಿಸಲಾಗಿದೆ. ಮೃತ ಉಗ್ರನ ಗುರುತನ್ನು ಅಧಿಕೃತವಾಗಿ ದೃಢೀಕರಿಸುವ ಪ್ರಕ್ರಿಯೆ ಮುಂದುವರಿದಿದೆ. ಘಟನಾ ಸ್ಥಳದಿಂದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಮ್ಮು-ಕಾಶ್ಮೀರ ಪೊಲೀಸ್, ರಾಷ್ಟ್ರಿಯ ರೈಫಲ್ಸ್ ಹಾಗೂ ಸಿಆರ್ಪಿಎಫ್ ಜಂಟಿಯಾಗಿ ಈ ಕಾರ್ಯಾಚರಣೆಯನ್ನು ನಡೆಸಿವೆ. ಸೇನೆಯ ವಿಶೇಷ ಉಗ್ರ ನಿಗ್ರಹ ಘಟಕ ವಿಕ್ಟರ್ ಫೋರ್ಸ್ ತೋಟ ಪ್ರದೇಶದ ಎಲ್ಲಾ ನಿರ್ಗಮನ ಮಾರ್ಗಗಳನ್ನು ಬಂದ್ ಮಾಡಿ, ಉಗ್ರರು ತಪ್ಪಿಸಿಕೊಳ್ಳದಂತೆ ಬಿಗಿ ಭದ್ರತಾ ವಲಯ ನಿರ್ಮಿಸಿತ್ತು. ರಾತ್ರಿ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಪ್ರದೇಶದಲ್ಲಿ ವಿಶೇಷ ಬೆಳಕಿನ ವ್ಯವಸ್ಥೆ ಕೂಡ ಮಾಡಲಾಗಿತ್ತು.
"ಓಡಬಹುದು... ಆದರೆ ಅಡಗಿಕೊಳ್ಳಲು ಸಾಧ್ಯವಿಲ್ಲ. ಶೋಪಿಯಾನ್ನಲ್ಲಿ ಎಸ್ಒಜಿ, ರಾಷ್ಟ್ರಿಯ ರೈಫಲ್ಸ್ ಮತ್ತು ಸಿಆರ್ಪಿಎಫ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರನನ್ನು ಹೊಡೆದುರುಳಿಸಲಾಗಿದೆ" ಎಂದು ಜಮ್ಮು-ಕಾಶ್ಮೀರ ಪೊಲೀಸರು, ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.