ಮುಂಬೈ, ಜು. 06 (DaijiworldNews/AK): ಮಹಾರಾಷ್ಟ್ರದಲ್ಲಿ ಭೀಕರ ಮಳೆಗೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.ಪ್ರತಿಷ್ಠಿತ ಏರಿಯಾಗಳೆಲ್ಲಾ ಜಲಾವೃತವಾಗಿದೆ. ಮಂಖುರ್ಡ್ ಪ್ರದೇಶದಲ್ಲಿ ಭಾರಿ ಮಳೆಯ ನಡುವೆ ಛಾವಣಿಯ ಒಂದು ಭಾಗ ಕುಸಿದು 6 ಜನರು ಸಾವನ್ನಪ್ಪಿದ್ದು, ಓರ್ವ ವ್ಯಕ್ತಿಗೆ ಗಾಯವಾಗಿದೆ. ಭೂಕುಸಿತದಿಂದಾಗಿ ಪುಣೆಯ ಮಾವಲ್ ಗ್ರಾಮದಲ್ಲಿ ಹಲವು ಮನೆ ಮುಚ್ಚಿಹೋಗಿದ್ದು, ಮೂವರು ಸಾವನ್ನಪ್ಪಿದ್ದಾರೆ. 23ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.

ಮೇ ತಿಂಗಳಲ್ಲಿ ಲೋಕಾರ್ಪಣೆಗೊಂಡಿದ್ದ ಪುಣೆ-ಮುಂಬೈ ಎಕ್ಸ್ಪ್ರೆಸ್ವೇ ಖೋಪೋಲಿ-ಕುಸ್ಗಾಂವ್ ಸಮೀಪದ `ಮಿಸ್ಸಿಂಗ್ ಲಿಂಕ್’ ಟನಲ್ 2ರ ಬಳಿ ಭೂಕುಸಿತದಿಂದಾಗಿ 2 ತಿಂಗಳು ಬಂದ್ ಆಗುವ ಸಾಧ್ಯತೆ ಇದೆ. ಹೀಗಾಗಿ, ಭಾರೀ ಮಟ್ಟದಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಹಲವು ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಮುಂಬೈ-ಪುಣೆ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಕಳೆದ 24 ಗಂಟೆಯಲ್ಲಿ ದಾಖಲೆಯ 300 ಮಿ.ಮೀ. ಮಳೆಯಾಗಿದೆ. ಎನ್ಡಿಆರ್ಎಫ್, ಎಸ್ಡಿಆರ್ಎಫ್, ಅಗ್ನಿಶಾಮಕದಳ, ಪೊಲೀಸರು ಹಲವೆಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಮುಂಬೈ ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಖಾಸಗಿ ಕಂಪನಿಗಳು ವರ್ಕ್ಫ್ರಂ ಹೋಮ್ಗೆ ಸೂಚಿಸಿವೆ.