ಕಲಬುರಗಿ, ಜು. 06 (DaijiworldNews/AA): ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಕೆಕೆಆರ್ಟಿಸಿ ಬಸ್ ಚಾಲನೆ ಮಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೆಕೆಆರ್ಟಿಸಿ ಅಧಿಕಾರಿಗಳು ಚಾಲಕ ಸೇರಿ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ.

ತಾಂತ್ರಿಕ ಸಿಬ್ಬಂದಿ ಶಿವಾನಂದ, ಮೇಲ್ವಿಚಾರಕ ಬಸವರಾಜ ಹಾಗೂ ನಿರ್ಲಕ್ಷ್ಯ ವಹಿಸಿದ ಚಾಲಕ ಆಕಾಶ್ನನ್ನ ಅಮಾನತು ಮಾಡಿ ಕಲಬುರಗಿ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಕಲಬುರಗಿಯಿಂದ ಚಿಂಚೋಳಿ ಮಾರ್ಗವಾಗಿ ಕೆಕೆಆರ್ಟಿಸಿ ಬಸ್ ಸಂಚರಿಸುತ್ತಿತ್ತು. ಬಸ್ಸಿನ ಹೆಡ್ಲೈಟ್ಗಳು ಸಂಪೂರ್ಣವಾಗಿ ಕೆಟ್ಟುಹೋಗಿದ್ದವು. ಈ ವೇಳೆ ಬಸ್ಸನ್ನು ರಸ್ತೆಯಲ್ಲೇ ನಿಲ್ಲಿಸುವ ಬದಲು ಅಥವಾ ಬದಲಿ ವ್ಯವಸ್ಥೆ ಮಾಡುವ ಬದಲು ಚಾಲಕ ಮತ್ತು ಕಂಡಕ್ಟರ್ ಮೊಬೈಲ್ ಟಾರ್ಚ್ ಹಿಡಿದು ಸುಮಾರು 90 ಕಿಲೋಮೀಟರ್ ದೂರ ಬಸ್ ಚಲಾಯಿಸಿದ್ದರು.
ಕಂಡಕ್ಟರ್ ಬಸ್ಸಿನ ಮುಂದಿನ ಕಿಟಕಿಯಿಂದ ಮೊಬೈಲ್ ಫೋನ್ ಫ್ಲಾಶ್ ಲೈಟ್ ಆನ್ ಮಾಡಿ ದಾರಿ ತೋರಿಸುತ್ತಿದ್ದರೆ, ಚಾಲಕ ಬಸ್ ಓಡಿಸುತ್ತಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.