ಬೆಂಗಳೂರು, ಜು. 06 (DaijiworldNews/AA): ಪಾಕ್ ಅಧಿಕಾರಿಗಳೊಂದಿಗೆ ಜಿಬಿಎ ಚುನಾವಣಾ ಬಿಜೆಪಿ ಉಸ್ತುವಾರಿ ರಾಮ್ ಮಾಧವ್ ಗೌಪ್ಯಸಭೆ ನಡೆಸಿದ್ದಾರೆ ಎಂದು ಆರೋಪಿಸಿದ್ದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ಗೆ ಲೀಗಲ್ ನೋಟಿಸ್ ನೀಡಲಾಗಿದೆ.

ರಾಮ್ ಮಾಧವ್ ಇಮೇಜ್ ಮತ್ತು ಖ್ಯಾತಿಯನ್ನು ಗುರಿಯಾಗಿಸಿಕೊಂಡು ಅವರ ವಿರುದ್ಧ ಆಧಾರರಹಿತ ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿ ಬಿಎನ್ಎಸ್ ಸೆಕ್ಷನ್ 356ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಅಲ್ಲದೆ, ಹರಿಪ್ರಸಾದ್ ರಾಮ್ ಮಾಧವ್ಗೆ ಕ್ಷಮೆ ಕೇಳಬೇಕೆಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ರಾಮ್ ಮಾಧವ್ ಪಾಕ್ ಅಧಿಕಾರಿಗಳ ಜೊತೆ ಗೌಪ್ಯಸಭೆ ನಡೆಸಿದ್ದಾರೆ. ಕೊಲಂಬೋ ಹಾಗೂ ಲಂಡನ್ನಲ್ಲಿ 4 ಸಭೆಗಳನ್ನು ಮಾಡಿದ್ದಾರೆ. ಹಿಲ್ಟನ್ ಹೋಟೆಲ್ನಲ್ಲಿ ರಾಮ್ ಮಾಧವ್ ಸಭೆ ನಡೆಸಿದ್ದಾರೆ. ಪಾಕ್ ಐಎಸ್ಐ ಮಾಜಿ ಮೇಜರ್ ಜನರಲ್ ಜೊತೆ ರಹಸ್ಯ ಮೀಟಿಂಗ್ ನಡೆಸಿದ್ದು, ಗೌಪ್ಯ ಸಭೆಯಲ್ಲಿ ಏನು ಮಾತಾಡಿದ್ದಾರೆಂದು ಸ್ಪಷ್ಟ ಪಡಿಸಬೇಕು ಎಂದು ಬೆಂಗಳೂರಿನಲ್ಲಿ ಹರಿಪ್ರಸಾದ್ ಹೇಳಿದ್ದರು.
ಆಪರೇಷನ್ ಸಿಂಧೂರ್ ಆಗಿ ಕೆಲ ತಿಂಗಳುಗಳು ಆಗಿಲ್ಲ. ಆಗಲೇ ಲಂಡನ್ಗೆ ಹೋಗಿ ರಾಮ್ ಮಾಧವ್ 4 ಸಭೆ ನಡೆಸಿದ್ದಾರೆ. ನಾನು ಬಿಜೆಪಿ ನಾಯಕ ರಾಮ್ ಮಾಧವ್ಗೆ ಕೇಳುತ್ತೇನೆ, ನೀವು ಬೆಂಗಳೂರಿಗೆ ಬರುವಾಗ ಇದಕ್ಕೆ ಉತ್ತರ ಕೊಡಬೇಕು. ರಹಸ್ಯ ಸಭೆ ನಡೆಸಲು ನಿಮಗೆ ಯಾರು ಅಧಿಕಾರ ಕೊಟ್ಟಿದ್ದಾರೆ? ವಿದೇಶಾಂಗ ಸಚಿವಾಲಯ ಸಭೆ ಮಾಡಬೇಕು. ಇವರು ವಿದೇಶಾಂಗ ಸಚಿವಾಲಯದಲ್ಲಿ ಮಂತ್ರಿ ಕೂಡ ಅಲ್ಲ. ಎಂಎಲ್ಎ ಅಲ್ಲ, ಎಂಪಿ ಅಲ್ಲ, ಕೇವಲ ಆರ್ಎಸ್ಎಸ್ ಪ್ರಚಾರಕ. ಹೀಗಿರುವಾಗ ಇವರಿಗೆ ಸಭೆ ಮಾಡೋಕೆ ಅಧಿಕಾರ ಕೊಟ್ಟರು ಯಾರು ಎಂದು ಬಹಿರಂಗಪಡಿಸಲಿ ಎಂದು ಅವರು ಆರೋಪಿಸಿದ್ದರು.