ನವದೆಹಲಿ, ಜು. 06 (DaijiworldNews/AA): ಇಂದಿನಿಂದ 6 ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಇಂಡೋನೇಷ್ಯಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದು, ಈ ದೇಶಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಪ್ರಧಾನಿ ಮೋದಿ ಇಂದಿನಿಂದ ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ಗೆ ಆರು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಈ ಭೇಟಿ ವೇಳೆ ಅವರು ದ್ವಿಪಕ್ಷೀಯ ಮಾತುಕತೆ ನಡೆಸುವ ಜೊತೆಗೆ ವ್ಯಾಪಾರ ಹಾಗೂ ಇನ್ನಿತರ ಪ್ರಮುಖ ಕ್ಷೇತ್ರಗಳ ಬಗ್ಗೆ ಸಂವಾದ ನಡೆಸಲಿದ್ದಾರೆ.
ಅಧ್ಯಕ್ಷ ಪ್ರಬೋವೋ ಸುಬಿಯಾಂಟೊ ಅವರ ಆಹ್ವಾನ ಮೇರೆಗೆ ಜು.6ರಿಂದ ೮ವರೆಗೆ ಮೋದಿ ಇಂಡೋನೇಷ್ಯಾಗೆ ತೆರಳಿದ್ದಾರೆ. ಭೇಟಿ ವೇಳೆ ಜಕಾರ್ತದಲ್ಲಿ ಮೋದಿ ಅನಿವಾಸಿ ಭಾರತೀಯರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜೊತೆಗೆ ಅವರು ಯುನೆಸ್ಕೋ ವಿಶ್ವ ಪರಂಪರೆಯ-ಪಟ್ಟಿಯಲ್ಲಿರುವ ಪ್ರಂಬನನ್ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.
ಇಂಡೋನೇಷ್ಯಾ ಬಳಿಕ ಪ್ರಧಾನಿ ಮೋದಿ ಜುಲೈ 8ರಿಂದ 10ರವರೆಗೆ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರ ಆಹ್ವಾನದ ಮೇರೆಗೆ ಮೆಲ್ಬೋರ್ನ್ಗೆ ತೆರಳಲಿದ್ದಾರೆ. ಈ ವೇಳೆ ಅವರು ಅಲ್ಬನೀಸ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬಳಿಕ ಆಸ್ಟ್ರೇಲಿಯಾದ ಗವರ್ನರ್ ಜನರಲ್ ಸ್ಯಾಮ್ ಮೋಸ್ಟಿನ್ ಎಸಿ ಅವರನ್ನು ಸಹ ಭೇಟಿಯಾಗಲಿದ್ದಾರೆ. ಜೊತೆಗೆ ಭಾರತ-ಆಸ್ಟ್ರೇಲಿಯಾ ಸಿಇಒ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ
ಆಸ್ಟ್ರೇಲಿಯಾ ಭೇಟಿಯ ನಂತರ ಪ್ರಧಾನಿ ಮೋದಿ ಜುಲೈ 10ರಿಂದ 11ರವರೆಗೆ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರ ಆಹ್ವಾನದ ಮೇರೆಗೆ ಎರಡು ದಿನಗಳ ಭೇಟಿಗಾಗಿ ನ್ಯೂಜಿಲೆಂಡ್ಗೆ ತೆರಳಲಿದ್ದಾರೆ. ಈ ವೇಳೆ ಅವರು ಪ್ರಧಾನಿ ಲಕ್ಸನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬಳಿಕ ಪ್ರಧಾನಿ ಅನಿವಾಸಿ ಭಾರತೀಯರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.