ಬಹದ್ದೂರ್ಗಢ, ಜು. 05 (DaijiworldNews/TA): ದೆಹಲಿ ಪೊಲೀಸರ ವಿಶೇಷ ಘಟಕದ ಕೌಂಟರ್ ಇಂಟೆಲಿಜೆನ್ಸ್ ವಿಭಾಗ ಹಾಗೂ ಹರಿಯಾಣ ಪೊಲೀಸರ ವಿಶೇಷ ಕಾರ್ಯಪಡೆ (ಎಸ್ಟಿಎಫ್) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ಗೆ ಸಂಬಂಧ ಹೊಂದಿದ್ದಾರೆ ಎನ್ನಲಾದ ಇಬ್ಬರು ಶಂಕಿತರು ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ದೆಹಲಿ ಪೊಲೀಸ್ ಕಾನ್ಸ್ಟೆಬಲ್ ಒಬ್ಬರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರನ್ನು ಹಿಸಾರ್ ಜಿಲ್ಲೆಯ ಟಿಬ್ಬಾ ದನಾಶೇರ್ ನಿವಾಸಿ ಪ್ರವೇಶ್ ಹಾಗೂ ಜಖೋಡ್ ಖೇರಾ ಗ್ರಾಮದ ಹಿಮಾಂಶು ಎಂದು ಗುರುತಿಸಲಾಗಿದೆ. ಇಬ್ಬರೂ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಗಳಾಗಿದ್ದು, ಹರಿಯಾಣ ಪೊಲೀಸರು ತಲಾ ರೂ.1 ಲಕ್ಷ ಬಹುಮಾನ ಘೋಷಿಸಿದ್ದರು.
ದೆಹಲಿ ಪೊಲೀಸ್ ವಿಶೇಷ ಘಟಕದ ಅಧಿಕಾರಿ ಪ್ರಮೋದ್ ಕುಶ್ವಾಹ್ ಅವರ ಮಾಹಿತಿ ಪ್ರಕಾರ, ಇಬ್ಬರು ಶಂಕಿತರು ಬಹದ್ದೂರ್ಗಢ ಪ್ರದೇಶಕ್ಕೆ ಬರುತ್ತಿದ್ದಾರೆ ಎಂಬ ಖಚಿತ ಗುಪ್ತಚರ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಜಂಟಿ ಕಾರ್ಯಾಚರಣೆ ಕೈಗೊಳ್ಳಲಾಯಿತು. ಆರೋಪಿಗಳು ಲಾರೆನ್ಸ್ ಬಿಷ್ಣೋಯ್-ಹರಿರಾಮ್ ಅಲಿಯಾಸ್ ಹ್ಯಾರಿ ಬಾಕ್ಸರ್-ಅನಿಲ್ ಪಂಡಿತ್ ಸಂಘಟಿತ ಅಪರಾಧ ಜಾಲದೊಂದಿಗೆ ಸಂಪರ್ಕ ಹೊಂದಿದ್ದರು ಎಂದು ತನಿಖಾ ಸಂಸ್ಥೆಗಳು ಆರೋಪಿಸಿವೆ.
ಜೂನ್ 11ರಂದು ಹನ್ಸಿಯಲ್ಲಿ ನಡೆದ ಜಿಮ್ ಆಪರೇಟರ್ ಕಪಿಲ್ ಅವರ ಹತ್ಯೆ ಪ್ರಕರಣದಲ್ಲಿ ಈ ಇಬ್ಬರು ಪ್ರಮುಖ ಆರೋಪಿಗಳಾಗಿದ್ದರು. ಹಗಲು ಹೊತ್ತಿನಲ್ಲೇ ನಡೆದ ಈ ಹತ್ಯೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ಬಂಧನಕ್ಕೆ ಹರಿಯಾಣ ಪೊಲೀಸರು ತಲಾ ರೂ.1 ಲಕ್ಷ ನಗದು ಬಹುಮಾನ ಘೋಷಿಸಿದ್ದರು. ಪೊಲೀಸರ ಪ್ರಕಾರ, ಶಂಕಿತರು ಶಸ್ತ್ರಸಜ್ಜಿತರಾಗಿದ್ದು ಮತ್ತೊಂದು ಗಂಭೀರ ಅಪರಾಧ ಎಸಗುವ ಉದ್ದೇಶದಿಂದ ಬಹದ್ದೂರ್ಗಢ ತಲುಪಿದ್ದರು. ಸ್ಥಳದಲ್ಲಿ ಪೊಲೀಸರು ಆರೋಪಿಗಳನ್ನು ಸುತ್ತುವರೆದು ಶರಣಾಗುವಂತೆ ಸೂಚಿಸಿದಾಗ, ಅವರು ಪೊಲೀಸ್ ತಂಡದ ಮೇಲೆ ಗುಂಡಿನ ದಾಳಿ ನಡೆಸಿದರು ಎನ್ನಲಾಗಿದೆ.
ಇದಕ್ಕೆ ಆತ್ಮರಕ್ಷಣೆಯ ಕ್ರಮವಾಗಿ ಪೊಲೀಸರು ಪ್ರತಿದಾಳಿ ನಡೆಸಿದ್ದು, ಕೆಲಕಾಲ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ಇಬ್ಬರು ಆರೋಪಿಗಳಿಗೆ ಗುಂಡೇಟು ತಗುಲಿದರೆ, ದೆಹಲಿ ಪೊಲೀಸ್ ವಿಶೇಷ ಘಟಕದ ಕಾನ್ಸ್ಟೆಬಲ್ ಅಂಕಿತ್ ಅವರ ಕಾಲಿಗೂ ಗುಂಡೇಟು ತಗುಲಿದೆ ಎಂದು ಹರಿಯಾಣ ಎಸ್ಟಿಎಫ್ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ಭೂಷಣ್ ತಿಳಿಸಿದ್ದಾರೆ. ಗಾಯಗೊಂಡ ಮೂವರನ್ನೂ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಕಾನ್ಸ್ಟೆಬಲ್ ಅಂಕಿತ್ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇಬ್ಬರು ಆರೋಪಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ಎನ್ಕೌಂಟರ್ಗೆ ಸಂಬಂಧಿಸಿದಂತೆ ಬಹದ್ದೂರ್ಗಢ ಸದರ್ ಪೊಲೀಸ್ ಠಾಣೆಯಲ್ಲಿ ಹೊಸ ಪ್ರಕರಣ ದಾಖಲಿಸಲಾಗಿದ್ದು, ಘಟನೆಯ ಸಂಪೂರ್ಣ ತನಿಖೆಯನ್ನು ಕಾನೂನು ಪ್ರಕಾರ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.