ನವದೆಹಲಿ, ಜೂ. 30 (DaijiworldNews/AK): ಜಪಾನ್ ಪ್ರಧಾನಿ ಸನಾ ಇ ಟಕೈಚಿ ಅವರು ಜುಲೈ 1 ರಿಂದ ಭಾರತಕ್ಕೆ ಅಧಿಕೃತ ಭೇಟಿ ನೀಡುತ್ತಿದ್ದಾರೆ.

ಜಪಾನ್ನ ಮೊದಲ ಮಹಿಳಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅವರು ಕೈಗೊಳ್ಳುತ್ತಿರುವ ಅತ್ಯಂತ ಮಹತ್ವದ ವಿದೇಶಿ ಪ್ರವಾಸ ಇದಾಗಿದೆ. ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜಪಾನ್ ಪ್ರಧಾನಿ ನಡೆಸಲಿರುವ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆಯು ಭಾರತ-ಜಪಾನ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ.
ಇಂಡೋ-ಪೆಸಿಫಿಕ್ ವಲಯದಲ್ಲಿ ಭೌಗೋಳಿಕ ರಾಜಕೀಯ ಸಮೀಕರಣಗಳು ಬದಲಾಗುತ್ತಿರುವ ಈ ಸಮಯದಲ್ಲಿ ಈ ಭೇಟಿ ನಡೆಯುತ್ತಿರುವುದರಿಂದ ಜಾಗತಿಕ ಮಟ್ಟದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಇಂಡೋ-ಪೆಸಿಫಿಕ್ ವಲಯದಲ್ಲಿ ಚೀನಾದ ಹೆಚ್ಚುತ್ತಿರುವ ಸೇನಾ ಪ್ರಭಾವವನ್ನು ಎದುರಿಸಲು ಉಭಯ ದೇಶಗಳ ರಕ್ಷಣಾ ಸಹಕಾರವನ್ನು ಬಲಪಡಿಸುವುದು ಈ ಮಾತುಕತೆಯ ಮುಖ್ಯ ಉದ್ದೇಶವಾಗಿದೆ. ‘ಕ್ವಾಡ್’ (QUAD – ಭಾರತ, ಜಪಾನ್, ಅಮೆರಿಕ, ಆಸ್ಟ್ರೇಲಿಯಾ) ಒಕ್ಕೂಟದ ಬದ್ಧತೆಗಳು ಮತ್ತು ಜಂಟಿ ಮಿಲಿಟರಿ ಸಮರಾಭ್ಯಾಸಗಳನ್ನು ವಿಸ್ತರಿಸುವ ಕುರಿತು ಉಭಯ ನಾಯಕರು ಚರ್ಚಿಸಲಿದ್ದಾರೆ.