ಬೆಂಗಳೂರು, ಜೂ. 29 (DaijiworldNews/AA): ಪೆರು ದೇಶದೊಂದಿಗೆ ಹತ್ತು ಬಿಲಿಯನ್ ಡಾಲರ್ ದ್ವಿಪಕ್ಷೀಯ ವ್ಯಾಪಾರ ವೃದ್ಧಿಗೆ ಐತಿಹಾಸಿಕ ಸಿಸ್ಟರ್ ಸಿಟಿ ಒಪ್ಪಂದ ಮಾಡಿಕೊಳ್ಳಲು ರಾಜ್ಯ ಸರ್ಕಾರ ಅತ್ಯಂತ ಉತ್ಸುಕವಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಭಾರತ ಮತ್ತು ಪೆರು ನಡುವಿನ 63 ವರ್ಷಗಳ ರಾಜತಾಂತ್ರಿಕ ಬಾಂಧವ್ಯ ಹಾಗೂ ಪೆರು ಗಣರಾಜ್ಯದ 205ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಉನ್ನತಮಟ್ಟದ ರಾಜತಾಂತ್ರಿಕ ಸಮಾರಂಭದಲ್ಲಿ ಮಾತನಾಡಿದ ಅವರು, "ಭಾರತದ ಐಟಿ ಸಾಫ್ಟವೇರ್ ಅಭಿವೃದ್ಧಿ ಮತ್ತು ಜೈವಿಕ ತಂತ್ರಜ್ಞಾನ ಉತ್ಪಾದನೆಯಲ್ಲಿ ರಾಜ್ಯವು ಶೇಕಡಾ 40 ಕ್ಕಿಂತ ಹೆಚ್ಚಿನ ಪಾಲನ್ನು ಹೊಂದುವ ಮೂಲಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ" ಎಂದು ಸಂತಸ ವ್ಯಕ್ತಪಡಿಸಿದರು.
"ಬೆಂಗಳೂರು ಮತ್ತು ಪೆರು ದೇಶದ ಪ್ರಮುಖ ನಗರದ ನಡುವೆ ವ್ಯಾಪಾರ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನೇರ ಸಾಂಸ್ಥಿಕ ಸಹಯೋಗ ಹೆಚ್ಚಿಸುವ ನಿಟ್ಟಿನಲ್ಲಿ ಈ ಸಿಸ್ಟರ್ ಸಿಟಿ ಒಪ್ಪಂದವು ಅತ್ಯಂತ ಮಹತ್ವದ್ದಾಗಿದೆ. ಇದು ಭವಿಷ್ಯದಲ್ಲಿ ಉಭಯ ದೇಶಗಳ ನಡುವಿನ ಹತ್ತು ಬಿಲಿಯನ್ ಡಾಲರ್ ದ್ವಿಪಕ್ಷೀಯ ವ್ಯಾಪಾರ ವೃದ್ಧಿಗೆ ಮುನ್ನುಡಿಯಾಗಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.