ನವದೆಹಲಿ, ಜೂ. 29 (DaijiworldNews/AA): ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಗಾಂಧಿ-ಗೋಡ್ಸೆ-ಗೋವು ಎಂದೆಲ್ಲಾ ಸಮಾಜದಲ್ಲಿ ಶಾಂತಿ ಕದಡುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಬೇರೆಯವರಿಗೆ ನೈತಿಕತೆ ಪಾಠ ಮಾಡುವ ಮೊದಲು ಸಾಂವಿಧಾನಿಕ ಹುದ್ದೆಗಳಿಗೆ ಘನತೆ ಹಾಗೂ ಗೌರವ ತೋರುವುದನ್ನು ಕಲಿಯಲಿ ಎಂದು ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ.

"ಸಮಾಜದ ಶಾಂತಿ ಮತ್ತು ಸೌಹಾರ್ದತೆಯನ್ನು ಬಲಿ ಕೊಟ್ಟು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವವರು ಬಿ.ಕೆ. ಹರಿಪ್ರಸಾದ್. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಒಂದೆಡೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದರೆ, ಮತ್ತೊಂದೆಡೆ ಪಕ್ಷದ ಹೊಸ ಅಧ್ಯಕ್ಷರು ಅಧಿಕಾರದ ಮದದಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸಲು ಯತ್ನಿಸುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಪ್ರಧಾನಿಯಾಗಲಿ, ಮುಖ್ಯಮಂತ್ರಿಯಾಗಲಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೋಟ್ಯಂತರ ಜನರಿಂದ ಮತ ಪಡೆದು ಆಯ್ಕೆಯಾದವರು. ರಾಜಕೀಯ ಪಕ್ಷಗಳ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ, ಸಾಂವಿಧಾನಿಕ ಹುದ್ದೆಗಳಿಗೆ ಹೋಲಿಕೆ ಮಾಡುವುದು ಸರಿಯಲ್ಲ" ಎಂದು ಕಿಡಿಕಾರಿದ್ದಾರೆ.
"ಕೆಪಿಸಿಸಿ ಅಧ್ಯಕ್ಷರು ಹೈಕಮಾಂಡ್ ಓಲೈಸಿಕೊಳ್ಳಲು ಗಾಂಧಿ-ಗೋಡ್ಸೆ-ಗೋವು ಎನ್ನುತ್ತ ಸಮಾಜದಲ್ಲಿ ಶಾಂತಿ ಕದಡುವ ಪ್ರಚೋದನಕಾರಿ ಮಾತುಗಳನ್ನು ಆಡುತ್ತಿದ್ದಾರೆ. ಇದು ಅತ್ಯಂತ ಕೀಳುಮಟ್ಟದ ರಾಜಕೀಯ ಹಾಗೂ ಸಂಸ್ಕೃತಿಹೀನತೆಯ ಪ್ರತೀಕ" ಎಂದು ಆಕ್ರೋಶ ಹೊರಹಾಕಿದ್ದಾರೆ.