ಬೆಂಗಳೂರು, ಜೂ. 29 (DaijiworldNews/AA): ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ನಾಯಕರ ವಿರುದ್ಧ ಅವಹೇಳನಕಾರಿ ಹಾಗೂ ಆಧಾರರಹಿತ ಆರೋಪಗಳನ್ನು ಮಾಡಿ ಶಿಸ್ತು ಉಲ್ಲಂಘಿಸಿದ ಹಿನ್ನೆಲೆಯಲ್ಲಿ, ಬಿಜೆಪಿ ರಾಜ್ಯ ಘಟಕದ ವಕ್ತಾರ ಹಾಗೂ ಮೈಸೂರಿನ ಎಂ.ಜಿ. ಮಹೇಶ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಲಾಗಿದೆ.

ಇದೇ ಜೂನ್ 19 ರಂದು ಸಂಜೆ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಎಂ.ಜಿ. ಮಹೇಶ್ ಅವರು ಹಿರಿಯ ನಾಯಕರ ವಿರುದ್ಧ ಕೀಳುಮಟ್ಟದ ಆರೋಪಗಳನ್ನು ಮಾಡುವ ಮೂಲಕ ಪಕ್ಷದ ಶಿಸ್ತು ಉಲ್ಲಂಘಿಸಿದ್ದರು. ಹೀಗಾಗಿ ಅವರ ವರ್ತನೆಗೆ ಸಂಬಂಧಿಸಿದಂತೆ ರಾಜ್ಯ ಶಿಸ್ತು ಸಮಿತಿಯು ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಉತ್ತರ ಕೇಳಿತ್ತು. ನೋಟಿಸ್ಗೆ ಎಂ.ಜಿ. ಮಹೇಶ್ ಅವರು ನೀಡಿದ ಸ್ಪಷ್ಟೀಕರಣವು ತೃಪ್ತಿಕರವಾಗಿಲ್ಲದ ಕಾರಣ ಅವರನ್ನು 6 ವರ್ಷಗಳ ಅವಧಿಗೆ ಉಚ್ಚಾಟಿಸಲಾಗಿದೆ.
ತಕ್ಷಣದಿಂದ ಜಾರಿಗೆ ಬರುವಂತೆ ಎಂ.ಜಿ. ಮಹೇಶ್ ಅವರನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಿ, ಮುಂದಿನ 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಪಕ್ಷದ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ ಎಂದು ರಾಜ್ಯ ಬಿಜೆಪಿಯ ಶಿಸ್ತು ಸಮಿತಿಯ ಅಧ್ಯಕ್ಷ ಲಿಂಗರಾಜು ಪಾಟೀಲ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.