ಕೊಯಮತ್ತೂರು, ಜೂ. 29 (DaijiworldNews/TA): ಯೂಟ್ಯೂಬ್ನಲ್ಲಿ ಲಭ್ಯವಿದ್ದ ವಿಡಿಯೋಗಳನ್ನು ಆಧರಿಸಿ ಮನೆಯಲ್ಲೇ ಹೆರಿಗೆ ಮಾಡಲು ಯತ್ನಿಸಿದ ಯುವತಿಯೊಬ್ಬರು ತೀವ್ರ ಪ್ರಸವಾನಂತರದ ರಕ್ತಸ್ರಾವದಿಂದ ಮೃತಪಟ್ಟಿರುವ ಘಟನೆ ತಮಿಳುನಾಡಿನ ತಿರುಪ್ಪೂರು ಜಿಲ್ಲೆಯ ಉತ್ತುಕುಳಿ ಸಮೀಪದ ತಲವೈಪಾಳಯಂನಲ್ಲಿ ನಡೆದಿದೆ.

ಮೃತರನ್ನು ಶಶಿಕಲಾ ಎಂದು ಗುರುತಿಸಲಾಗಿದೆ. ಜೂನ್ 25ರಂದು ಅವರು ಮನೆಯಲ್ಲೇ ಹೆರಿಗೆ ಮಾಡಲು ಪ್ರಯತ್ನಿಸಿದ ವೇಳೆ ಹೆರಿಗೆ ಪ್ರಕ್ರಿಯೆ ಸಂಕೀರ್ಣಗೊಂಡಿದ್ದು, ಬಳಿಕ ತೀವ್ರ ರಕ್ತಸ್ರಾವ ಉಂಟಾಯಿತು. ತಕ್ಷಣ ಅವರನ್ನು ಪೆರುಂಡುರೈನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಆಸ್ಪತ್ರೆಯಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಸುರಕ್ಷಿತವಾಗಿ ಹೊರತೆಗೆದರು. ನವಜಾತ ಶಿಶುವನ್ನು ವಿಶೇಷ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿತಿ ವೈದ್ಯರ ಮೇಲ್ವಿಚಾರಣೆಯಲ್ಲಿದೆ. ಆದರೆ, ಶಶಿಕಲಾ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟರು.
ಪ್ರಾಥಮಿಕ ತನಿಖೆಯ ಪ್ರಕಾರ, ಶಶಿಕಲಾ ಅವರ ಮೊದಲ ಹೆರಿಗೆ ಸಿಸೇರಿಯನ್ (ಸಿ-ಸೆಕ್ಷನ್) ಮೂಲಕ ನಡೆದಿತ್ತು. ಎರಡನೇ ಮಗುವನ್ನು ಸಹಜ ಹೆರಿಗೆಯ ಮೂಲಕ ಪಡೆಯುವ ಉದ್ದೇಶದಿಂದ ಅವರ ಪತಿ ಮತ್ತು ಅತ್ತೆ ಆಸ್ಪತ್ರೆಯ ವೈದ್ಯಕೀಯ ಮೇಲ್ವಿಚಾರಣೆಯನ್ನು ತಪ್ಪಿಸಿ ಮನೆಯಲ್ಲೇ ಹೆರಿಗೆ ಮಾಡಲು ನಿರ್ಧರಿಸಿದ್ದರೆಂದು ತಿಳಿದುಬಂದಿದೆ.
ತನಿಖೆಯಲ್ಲಿ, ಯೂಟ್ಯೂಬ್ನಲ್ಲಿ ಲಭ್ಯವಿದ್ದ ವಿಡಿಯೋಗಳನ್ನು ವೀಕ್ಷಿಸಿ ಮನೆಯಲ್ಲೇ ಹೆರಿಗೆ ಮಾಡಲು ಪ್ರಯತ್ನಿಸಿದ್ದ ಮಾಹಿತಿ ಬಹಿರಂಗವಾಗಿದೆ. ಹೆರಿಗೆಯ ವೇಳೆ ಜರಾಯು ಸಂಪೂರ್ಣವಾಗಿ ಹೊರಬರದೇ ಉಳಿದ ಕಾರಣ ತೀವ್ರ ಪ್ರಸವಾನಂತರದ ರಕ್ತಸ್ರಾವ ಉಂಟಾಗಿ, ಅದೇ ಅವರ ಸಾವಿಗೆ ಕಾರಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಉತ್ತುಕುಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ಸಂಪೂರ್ಣ ವಿವರಗಳನ್ನು ತಿಳಿಯಲು ತನಿಖೆ ಮುಂದುವರಿಸಿದ್ದಾರೆ.