ಚೆನ್ನೈ, ಜೂ. 29 (DaijiworldNews/AA): ಸಿಎಂ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ 5 ವರ್ಷಗಳ ವರೆಗೆ ಉಳಿಯುವುದಿಲ್ಲ. 3 ರಿಂದ 6 ತಿಂಗಳಲ್ಲಿ ಪತನವಾಗುತ್ತದೆ ಎಂದು ಮಾಜಿ ಸಿಎಂ ಹಾಗೂ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಭವಿಷ್ಯ ನುಡಿದಿದ್ದಾರೆ.

ಪ್ರಸ್ತುತ ರಾಜಕೀಯ ಬೆಳವಣಿಗೆ ಕುರಿತು ಡಿಎಂಕೆ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, "ವಿಜಯ್ ಅವರ ಸರ್ಕಾರ ಮೈತ್ರಿ ಪಕ್ಷಗಳ ಬೆಂಬಲದಿಂದಷ್ಟೇ ಬದುಕುಳಿದಿದೆ. ಈ ಸರ್ಕಾರ 5 ವರ್ಷ ಪೂರ್ಣಗೊಳ್ಳುವುದಿಲ್ಲ. ವಿಜಯ್ ಅವದ್ದು ಅಲ್ಪಸಂಖ್ಯಾತ ಸರ್ಕಾರವಾಗಿದ್ದು, ಮುಂದಿನ 3 ರಿಂದ 6 ತಿಂಗಳ ಒಳಗೆ ಪತನಗೊಳ್ಳಬಹುದು" ಎಂದಿದ್ದಾರೆ.
"ಆಡಳಿತಾರೂಢ ಟಿವಿಕೆ ಸ್ವತಂತ್ರವಾಗಿ ಆಡಳಿತ ನಡೆಸಲು ಪೂರ್ಣ ಜನಾದೇಶ ಹೊಂದಿಲ್ಲ. ಅಗತ್ಯ 118 ಬಹುಮತದ ಪೈಕಿ 108 ಸ್ಥಾನಗಳನ್ನ ಮಾತ್ರ ಗಳಿಸಿದೆ. ಈ ಚುನಾವಣೆಯಲ್ಲಿ ಜನ ಡಿಎಂಕೆ ಸರ್ಕಾರ ರಚಿಸಬೇಕೆಂದೇ ಮತ ಚಲಾಯಿಸಿದ್ದರು. ಆದ್ರೆ ನಮ್ಮ ಮೈತ್ರಿಕೂಟದ ಭಾಗವಾಗಿದ್ದ ಕೆಲ ಪಕ್ಷಗಳ ತಂತ್ರ ಹಾಗೂ ಅವರ ಜೊತೆಗಿನ ಹೊಂದಾಣಿಕೆಯಿಂದ ಟಿವಿಕೆ ಸರ್ಕಾರ ಜೀವಂತವಾಗಿದೆ" ಎಂದು ತಿಳಿಸಿದ್ದಾರೆ.
"ಇದೊಂದು ಅಲುಗಾಡುವ ಸೆಟಪ್, ಈ ವಾಹನ ಯಾವ ಜಂಕ್ಷನ್ ಅಥವಾ ತಿರುವಿನಲ್ಲಿ ತನ್ನ ಸಮತೋಲನ ಕಳೆದುಕೊಂಡು ಹಠಾತ್ ಸ್ಥಗಿತಗೊಳ್ಳುತ್ತೋ ಗೊತ್ತಿಲ್ಲ. ಆದ್ದರಿಂದ ಚುನಾವಣೆಗಳು ಯಾವುದೇ ಸಮಯದಲ್ಲಿ ಬರಬಹುದು. 5 ವರ್ಷಗಳ ಕಾಲ ಕಾಯುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.