ರಿಯಾಸಿ,ಜೂ. 28 (DaijiworldNews/AK): ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಮಾತಾ ವೈಷ್ಣೋದೇವಿ ದೇವಸ್ಥಾನದ ಬಳಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ಇಂದು ಭೀಕರ ಅಪಘಾತ ಸಂಭವಿಸಿದೆ.

ತಾರಾಕೋಟ್ ಮಾರ್ಗದಲ್ಲಿ ವಾಹನವು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, 8 ಮಂದಿ ಸಿಐಎಸ್ಎಫ್ ಸಿಬ್ಬಂದಿ ಮತ್ತು ಚಾಲಕ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಾಳುಗಳ ಪೈಕಿ ಮೂವರು ಸಿಐಎಸ್ಎಫ್ ಸಿಬ್ಬಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಅವರನ್ನು ಹೆಡ್ ಕಾನ್ಸ್ಟೆಬಲ್ಗಳಾದ ಸ್ಯಾಮಿ ಕುಮಾರ್, ಎಂ.ಎಂ. ದುಬೆ ಮತ್ತು ಕಾನ್ಸ್ಟೆಬಲ್ ಪಿ.ಕೆ. ತ್ರಾಯಾ ಎಂದು ಗುರುತಿಸಲಾಗಿದೆ. ಈ ಮೂವರನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಳಿದ ಗಾಯಾಳುಗಳಲ್ಲಿ ಒಬ್ಬರು ಸಿಐಎಸ್ಎಫ್ ಸಬ್ ಇನ್ಸ್ಪೆಕ್ಟರ್ ಮತ್ತು ಬಸ್ ಚಾಲಕ ವೀರೇಂದ್ರ ಸಿಂಗ್ ಸೇರಿದ್ದಾರೆ. ಅವರನ್ನು ಕತ್ರಾದಲ್ಲಿರುವ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ದೇವಸ್ಥಾನದ ಆವರಣದಲ್ಲಿ ತಮ್ಮ ಕರ್ತವ್ಯ ಮುಗಿಸಿ ಸಿಬ್ಬಂದಿ ಕ್ಯಾಂಪ್ಗೆ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಬಸ್ ಪಲ್ಟಿಯಾಗಲು ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.