ಮೈಸೂರು, ಜೂ. 28 (DaijiworldNews/AK): ನನ್ನ ರಾಜಕೀಯ ಜೀವನ ಮುಗಿದಿದೆ. ನಿಮ್ಮ ರಾಜಕೀಯ ಭವಿಷ್ಯ ಉತ್ತಮವಾಗಿರಬೇಕಾದರೆ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ. ಇಲ್ಲದೆ ಇದ್ದರೆ ನಿಮ್ಮ ರಾಜಕೀಯ ಮಾರಣಹೋಮ ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.

ಮೈಸೂರಿನಲ್ಲಿ ನಡೆದ ಎಸ್ಐಆರ್ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸುವ ಚುನಾವಣಾ ಆಯೋಗ ಇಲ್ಲದಂತಾಗಿದೆ. ಬಿಜೆಪಿನೇತೃತ್ವದಲ್ಲಿ ದುರಾಡಳಿತ ನಡೆಯುತ್ತಿದೆ ಎಂದು ಆರೋಪಿಸಿದರು.
ಸರ್ವಾಧಿಕಾರದಲ್ಲಿ ನಂಬಿಕೆ ಹೊಂದಿರುವ ಬಿಜೆಪಿ, ದೇಶದಲ್ಲಿ ಸರ್ವಾಧಿಕಾರ ಸ್ಥಾಪಿಸಲು ಹೊರಟಿದೆ. ಶೂದ್ರರು ಬಿಜೆಪಿ ಜೊತೆ ಹೋಗಬಾರದು. ಬಿಜೆಪಿ ಶೂದ್ರರ ವಿರೋಧಿ. ಸುಳ್ಳನ್ನು ಮಾರಾಟ ಮಾಡುವ ಸುಳ್ಳಿನ ಕಾರ್ಖಾನೆ ಬಿಜೆಪಿ. ಅಧಿಕಾರಕ್ಕಾಗಿ ಬಿಜೆಪಿ ಯಾವುದೇ ಮಟ್ಟಕ್ಕೂ ಇಳಿಯಲು ಸಿದ್ಧವಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಎಚ್ಚರ ತಪ್ಪಿದರೆ ಬಿಜೆಪಿ ನಿಮ್ಮನ್ನು ರಾಜಕೀಯವಾಗಿ ಮುಗಿಸುತ್ತದೆ. ಒಂದು ತಿಂಗಳು ಮೈಮರೆತರೂ ನಿಮ್ಮ ರಾಜಕೀಯ ಭವಿಷ್ಯಕ್ಕೆ ದೊಡ್ಡ ಹೊಡೆತ ಬೀಳುತ್ತದೆ ಎಂದು ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಕಾಂಗ್ರೆಸ್ ನಾಯಕರು, ಶಾಸಕರು ಹಾಗೂ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದರು.
ಎಸ್ಐಆರ್ ಹೊಸ ಪ್ರಕ್ರಿಯೆಯಲ್ಲ. 1952ರಿಂದಲೇ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಾ ಬಂದಿದೆ. ಆದರೆ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಅಧಿಕಾರ ಆಯೋಗಕ್ಕೆ ಇಲ್ಲ ಎಂದು ಹೇಳಿದರು. 2014ರ ಬಳಿಕ “ಮತ ದ್ರೋಹ” ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ಗೆ ಮತ ಹಾಕುವ ಬಡವರು, ರೈತರು, ಕಾರ್ಮಿಕರು ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಗುರಿಯಾಗಿಸಿ ಪಟ್ಟಿಯಿಂದ ಕೈಬಿಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು
ದೇಶದಲ್ಲಿ ಬಿಜೆಪಿ ಪಕ್ಷ ಕೇವಲ 36% ಮತ ಪಡೆದಿದೆ. 64% ಜನ ಬಿಜೆಪಿ ವಿರುದ್ಧವಾಗಿ ಮತ ಹಾಕಿದ್ದಾರೆ. ಈ 64% ನಲ್ಲಿ 10% ಮತಗಳನ್ನು ಕೈಬಿಟ್ಟರೆ ಏನಾಗುತ್ತದೆ ಎಂದು ಊಹಿಸುವುದು ಕಷ್ಟ. ನಮ್ಮ ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರು ಎಸ್ಐಆರ್ ಕಾರ್ಯ ನಡೆಯುವ ಜೂನ್ 30 ರಿಂದ ಜುಲೈ 29 ರ ವರೆಗೆ ಒಂದು ತಿಂಗಳ ಕಾಲ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಈಗ ದೇಶದಲ್ಲಿ ಸಂವಿಧಾನಬದ್ಧವಾದ ಚುನಾವಣಾ ಆಯೋಗ ಇಲ್ಲ ಎನ್ನುವುದನ್ನು ಮರೆಯಬೇಡಿ. 2019ರಲ್ಲಿ ಬಿಜೆಪಿಯ 303 ಜನ ಗೆದ್ದಿದ್ದರು, ಈಗ 2024ರಲ್ಲಿ 240ಕ್ಕೆ ಇಳಿದಿದ್ದಾರೆ. ಇದಕ್ಕೆ ಬೆಲೆಯೇರಿಕೆ, ವಚನ ಭ್ರಷ್ಟತೆ, ನಿರುದ್ಯೋಗ ಕಾರಣ. ಈ ಫಲಿತಾಂಶವನ್ನು ಮುಂದಿನ ದಿನಗಳಲ್ಲಿ ಎಸ್ಐಆರ್ ಮೂಲಕ ಬದಲಾಯಿಸಲು ಹೊರಟಿದ್ದಾರೆ.
ಬಿಜೆಪಿಯವರು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿಗಳು. ಅವರಿಗೆ ಸರ್ವಾಧಿಕಾರದಲ್ಲಿ ಮಾತ್ರ ನಂಬಿಕೆ. ಅವರದ್ದು ಒನ್ ನೇಷನ್, ಒನ್ ಎಲೆಕ್ಷನ್ ನೀತಿ. ಹಿಂದುತ್ವದ ಮಾತಾಡುವವರು ಜಾತಿ, ವರ್ಣಾಶ್ರಮದ ಹೆಸರಲ್ಲಿ ಜನರನ್ನು ಶೋಷಣೆ ಮಾಡಿಲ್ಲವೇ? ಶೂದ್ರ ಸಮುದಾಯ ಬಿಜೆಪಿ ಜೊತೆ ಹೋಗಲೇಬಾರದು. ಸಾಮಾಜಿಕ ನ್ಯಾಯ ಬರಬಾರದು, ಬಂದರೆ ಶೋಷಣೆಗೆ ಅವಕಾಶ ಇಲ್ಲ ಎಂಬುದನ್ನು ಅವರು ಅರಿತಿದ್ದಾರೆ. ಬಿಜೆಪಿ ಪಕ್ಷದವರು ಸುಳ್ಳನ್ನು ಸೃಷ್ಟಿಸಿ, ಮಾರಾಟ ಮಾಡಿ, ಅದನ್ನೇ ಸತ್ಯ ಮಾಡುತ್ತಾರೆ.
13 ರಾಜ್ಯಗಳಲ್ಲಿ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆಗಿದೆ, ಹರಿಯಾಣ, ಪಶ್ಚಿಮ ಬಂಗಾಳ, ಮಹಾರಾಷ್ಟ್ರದಲ್ಲಿ ಫಲಿತಾಂಶ ಏನಾಗಿದೆ? ಕೇರಳದಲ್ಲಿ ಇವರ ಆಟ ನಡೆಯಲಿಲ್ಲ ಅಷ್ಟೆ. ಬಿಜೆಪಿ ಎರಡು ಬಾರಿಯೂ ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು. ಅವರು ಅಧಿಕಾರದಲ್ಲಿ ಉಳಿಯಲು ಏನು ಮಾಡಲು ಹೇಸದವರು ಎಂದು ಆಕ್ರೋಶ ವ್ಯಕ್ತಪಡಿಸಿದರು.