ಬಾಗಲಕೋಟೆ, ಜೂ. 28 (DaijiworldNews/TA): ನಿಯಂತ್ರಣ ತಪ್ಪಿದ ಟ್ಯಾಂಕರ್ ರಸ್ತೆ ಬದಿಯ 150 ಅಡಿ ಆಳದ ಬಾವಿಗೆ ಉರುಳಿ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರ ಗ್ರಾಮದ ಸಮೀಪ ನಡೆದಿದೆ.

ಮೃತರನ್ನು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳವಾಡ ಗ್ರಾಮದ ನಿವಾಸಿ ಮಂಜುನಾಥ ಆಟವಾಳಕರ್ ಎಂದು ಗುರುತಿಸಲಾಗಿದೆ. ಅವರು ಟ್ಯಾಂಕರ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಲಭ್ಯ ಮಾಹಿತಿ ಪ್ರಕಾರ, ಕಾರ್ಖಾನೆಯೊಂದರ ತ್ಯಾಜ್ಯವನ್ನು ತುಂಬಿಕೊಂಡು ಸಾಗುತ್ತಿದ್ದ ಟ್ಯಾಂಕರ್ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಆಳವಾದ ಬಾವಿಗೆ ಉರುಳಿ ಬಿದ್ದಿದೆ. ಅಪಘಾತದ ರಭಸಕ್ಕೆ ಚಾಲಕ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದರು. ಸುಮಾರು 150 ಅಡಿ ಆಳದ ಬಾವಿಯಿಂದ ಟ್ಯಾಂಕರ್ ಹಾಗೂ ಚಾಲಕನ ಮೃತದೇಹವನ್ನು ಹೊರತೆಗೆಯಲು ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.