ಬೆಂಗಳೂರು, ಜೂ. 28 (DaijiworldNews/TA): ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ಲೇಖಕ ಹಾಗೂ ಪತ್ರಕರ್ತ ಎನ್. ಎಸ್. ಶಂಕರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಲಗಿದ್ದಾಗಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಅವರ ನಿಧನದ ಸುದ್ದಿ ಕನ್ನಡ ಚಿತ್ರರಂಗ ಮತ್ತು ಪತ್ರಿಕೋದ್ಯಮ ವಲಯದಲ್ಲಿ ತೀವ್ರ ಶೋಕ ಮೂಡಿಸಿದೆ.

‘ಉಲ್ಟಾ ಪಲ್ಟಾ’ ಸೇರಿದಂತೆ ಹಲವು ಗಮನಾರ್ಹ ಚಿತ್ರಗಳಿಗೆ ನಿರ್ದೇಶನ ನೀಡಿದ್ದ ಎನ್.ಎಸ್. ಶಂಕರ್, ತಮ್ಮ ವಿಶಿಷ್ಟ ಕಥಾ ನಿರೂಪಣೆ ಮತ್ತು ನಿರ್ದೇಶನ ಶೈಲಿಯಿಂದ ಕನ್ನಡ ಸಿನಿರಸಿಕರ ಮನಗೆದ್ದಿದ್ದರು. ಚಿತ್ರರಂಗದ ಜೊತೆಗೆ ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ಅವರು ಮಹತ್ವದ ಕೊಡುಗೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಜನಿಸಿದ್ದ ಎನ್.ಎಸ್. ಶಂಕರ್ ಅವರು ಬಾಲ್ಯವನ್ನು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಕಳೆದರು. ಮೈಸೂರಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ ಅವರು, ಬೆಂಗಳೂರಿನಲ್ಲಿ ಕಾಲೇಜು ಶಿಕ್ಷಣ ಪಡೆದಿದ್ದರು. ವೃತ್ತಿ ಜೀವನವನ್ನು ಪತ್ರಕರ್ತರಾಗಿ ಆರಂಭಿಸಿದ ಶಂಕರ್, ‘ಪ್ರಜಾವಾಣಿ’, ‘ಮುಂಗಾರು’ ಮತ್ತು ‘ಲಂಕೇಶ್ ಪತ್ರಿಕೆ’ ಸೇರಿದಂತೆ ಹಲವು ಹೆಸರಾಂತ ಕನ್ನಡ ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಚಿತ್ರರಂಗ ಪ್ರವೇಶಿಸಿ ನಿರ್ದೇಶಕರಾಗಿ ತಮ್ಮದೇ ಆದ ಛಾಪು ಮೂಡಿಸಿದರು.
ಅತ್ಯುತ್ತಮ ಬರಹಗಾರರಾಗಿದ್ದ ಎನ್.ಎಸ್. ಶಂಕರ್ ಅವರು ಅನೇಕ ಪುಸ್ತಕಗಳನ್ನು ರಚಿಸಿದ್ದು, ಕನ್ನಡ ಸಾಹಿತ್ಯ ಲೋಕಕ್ಕೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಬರವಣಿಗೆ ಹಾಗೂ ಸೃಜನಶೀಲತೆ ಹಲವು ಓದುಗರ ಮೆಚ್ಚುಗೆಗೆ ಪಾತ್ರವಾಗಿತ್ತು. ಎನ್.ಎಸ್. ಶಂಕರ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು, "ಶಂಕರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ" ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಎನ್.ಎಸ್. ಶಂಕರ್ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗ, ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರಗಳು ಬಹುಮುಖ ಪ್ರತಿಭೆಯನ್ನು ಕಳೆದುಕೊಂಡಂತಾಗಿದೆ. ಅವರ ಕೃತಿಗಳು ಮತ್ತು ಸೃಜನಶೀಲ ಕೊಡುಗೆಗಳು ಸದಾ ಕನ್ನಡಿಗರ ಮನದಲ್ಲಿ ಉಳಿಯಲಿವೆ. ಎನ್ಎಸ್ ಶಂಕರ್ ಅವರು ಜನಿಸಿದ್ದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ. ಆದರೆ ಅವರು ಬಾಲ್ಯವನ್ನು ಕಳೆದಿದ್ದು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ. ಹೈಸ್ಕೂಲ್ ಓದಿದ್ದು ಮೈಸೂರಿನಲ್ಲಿ. ಕಾಲೇಜು ಶಿಕ್ಷಣವನ್ನು ಅವರು ಬೆಂಗಳೂರಿನಲ್ಲಿ ಪಡೆದರು. ಮೊದಲು ಪತ್ರಕರ್ತರಾಗಿದ್ದ ಅವರು ನಂತರ ಚಿತ್ರರಂಗಕ್ಕೆ ಬಂದು ಅಲ್ಲಿಯೂ ಯಶಸ್ಸು ಕಂಡರು.