ಬೆಂಗಳೂರು, ಜೂ. 27 (DaijiworldNews/AK): ಮುಂಗಾರು ಮಳೆಯ ಅಬ್ಬರದ ನಡುವೆಯೇ ಕರ್ನಾಟಕದಾದ್ಯಂತ ಮುಂದಿನ 7 ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜೂನ್ 27 ರಂದು ಅಂದರೆ ಇಂದು ಇಲಾಖೆ ಬಿಡುಗಡೆ ಮಾಡಿರುವ ಹವಾಮಾನ ವರದಿ ಮತ್ತು ಎಚ್ಚರಿಕೆಯ ಪ್ರಕಾರ, ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಸಿಡಿಲು ಮತ್ತು ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಜೂನ್ 30 ರಿಂದ ರಾಜ್ಯದ ಕೆಲವು ಸ್ಥಳಗಳಲ್ಲಿ ಮಳೆಯ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಹೇಳಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ 7 ದಿನಗಳ ಕಾಲ ನಿರಂತರ ಮಳೆಯಾಗಲಿದ್ದು, ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಜೂನ್ 27 ಮತ್ತು ಜೂನ್ 28, 29, 30ರವರೆಗೆ ಭಾರಿ ಮಳೆಯಾಗಲಿದ್ದು, ಇದರೊಂದಿಗೆ ಭೀಕರ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇನ್ನು ಜುಲೈ 1 ರಿಂದ ಜುಲೈ 3ರಂದು ಮುಂಗಾರು ಮಳೆಯ ಆರ್ಭಟ ಮುಂದುವರಿಯಲಿದ್ದು, ಸತತವಾಗಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಮಳೆ ಹಾಗೂ ಸಿಡಿಲಿನ ಮುನ್ಸೂಚನೆ ಇರುವುದರಿಂದ ಸಾರ್ವಜನಿಕರು ಹಾಗೂ ವಿಶೇಷವಾಗಿ ರೈತರು ಮತ್ತು ಮೀನುಗಾರರು ಜಾಗರೂಕರಾಗಿರಬೇಕು. ಗುಡುಗು ಸಿಡಿಲಿನ ಸಂದರ್ಭದಲ್ಲಿ ಮರಗಳ ಕೆಳಗೆ ನಿಲ್ಲದಂತೆ ಹಾಗೂ ಹಳೆಯ ಕಟ್ಟಡಗಳ ಆಶ್ರಯ ಪಡೆಯದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.