ನವದೆಹಲಿ, ಜೂ. 27 (DaijiworldNews/AA): ಭಾರತದ ಹೈದರಾಬಾದ್ನಲ್ಲಿರುವ ರಸ್ತೆಯೊಂದಕ್ಕೆ ತಮ್ಮ ಹೆಸರಿಟ್ಟಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಧನ್ಯವಾದ ತಿಳಿಸಿದ್ದಾರೆ.

ದಕ್ಷಿಣ ಭಾರತದ ನಗರದಲ್ಲಿ ಅಮೆರಿಕ ಕಾನ್ಸುಲೇಟ್ಗೆ ಹೊಂದಿಕೊಂಡಿರುವ ರಸ್ತೆಗೆ ತೆಲಂಗಾಣ ಸರ್ಕಾರ 'ಡೊನಾಲ್ಡ್ ಟ್ರಂಪ್ ಅವೆನ್ಯೂ' ಎಂದು ಹೆಸರಿಸಿದೆ. ಈ ಮಾಹಿತಿ ತಿಳಿದ ಟ್ರಂಪ್ 'ಈ ರೀತಿ ಗೌರವ ಪಡೆದ ಮೊದಲ ಅಮೆರಿಕದ ಅಧ್ಯಕ್ಷರು ನಾನು' ಎಂದು ಶುಕ್ರವಾರ ಟ್ರುತ್ ಸೋಶಿಯಲ್ ಮೀಡಿಯಾದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.
ಭಾರತದ ಹೈದರಾಬಾದ್ನಲ್ಲಿರುವ ಹೊಸ ಡೊನಾಲ್ಡ್ ಟ್ರಂಪ್ ಅವೆನ್ಯೂ. ಈ ರೀತಿ ಗೌರವಿಸಲ್ಪಟ್ಟ ಮೊದಲ ಅಮೆರಿಕದ ಅಧ್ಯಕ್ಷ ನಾನು. ಧನ್ಯವಾದಗಳು ಎಂದು ಟ್ರಂಪ್ ಪೋಸ್ಟ್ ಶೇರ್ ಮಾಡಿದ್ದಾರೆ. ಜೊತೆಗೆ ಈ ವಾರದ ಆರಂಭದಲ್ಲಿ ತೆಲಂಗಾಣ ಡಿಸಿಎಂ ಮಲ್ಲು ಭಟ್ಟಿ ವಿಕ್ರಮಾರ್ಕ ಮತ್ತು ಭಾರತಕ್ಕೆ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಅವರು ಈ ಫಲಕವನ್ನು ಅನಾವರಣಗೊಳಿಸುತ್ತಿರುವ ಛಾಯಾಚಿತ್ರವನ್ನು ಹಂಚಿಕೊಂಡಿದ್ದರು.
ತೆಲಂಗಾಣ ಸರ್ಕಾರವು ಈ ಪದನಾಮವನ್ನು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಸಲ್ಲಿಸುವ ಗೌರವ ಮತ್ತು ಅಮೆರಿಕ-ಭಾರತ ಸಂಬಂಧಗಳಲ್ಲಿ ಹೈದರಾಬಾದ್ನ ಬೆಳೆಯುತ್ತಿರುವ ಪಾತ್ರವನ್ನು ಗುರುತಿಸುತ್ತದೆ ಎಂದು ತಿಳಿಸಿದೆ.