ಬಿಹಾರ, ಜೂ. 27 (DaijiworldNews/TA): ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹವಿಲ್ಲದ ಬಿಹಾರದ ಸಣ್ಣ ಹಳ್ಳಿಯಲ್ಲಿ ಜನಿಸಿದ ಪ್ರಿಯಾ ರಾಣಿ ಇಂದು ದೇಶದ ಅತ್ಯುನ್ನತ ಆಡಳಿತ ಸೇವೆಯಾದ ಐಎಎಸ್ ಅಧಿಕಾರಿಯಾಗಿ ಸಾವಿರಾರು ಯುಪಿಎಸ್ಸಿ ಆಕಾಂಕ್ಷಿಗಳಿಗೆ ಪ್ರೇರಣೆಯಾಗಿದ್ದಾರೆ. ಕಠಿಣ ಪರಿಶ್ರಮ, ದೃಢ ಸಂಕಲ್ಪ ಮತ್ತು ನಿರಂತರ ಪ್ರಯತ್ನದಿಂದ ಅವರು ಯಶಸ್ಸಿನ ಶಿಖರ ತಲುಪಿದ್ದಾರೆ. ಅವರ ಯಶಸ್ಸಿನ ಕಥನ ಇದು.

ಪ್ರಿಯಾ ರಾಣಿ ಬಿಹಾರದ ಕುರ್ಕುರಿ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದರು. ಆ ಕಾಲದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಷ್ಟಾಗಿ ಆದ್ಯತೆ ಇರಲಿಲ್ಲ. ಆದರೆ, ಅವರ ತಾತ ಮೊಮ್ಮಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕುಟುಂಬವನ್ನೇ ಬಿಹಾರದ ರಾಜಧಾನಿ ಪಾಟ್ನಾಗೆ ಸ್ಥಳಾಂತರಿಸಿದರು. ತಾತನ ನಿರ್ಧಾರಕ್ಕೆ ತಕ್ಕಂತೆ ಪ್ರಿಯಾ ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಿ, ಪ್ರತಿಷ್ಠಿತ ಬಿಐಟಿ ಮೆಸ್ರಾ ಸಂಸ್ಥೆಯಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದರು.
ಪದವಿ ಪೂರ್ಣಗೊಂಡ ಬಳಿಕ ಅವರಿಗೆ ಬೆಂಗಳೂರಿನ ಪ್ರಮುಖ ಕಾರ್ಪೊರೇಟ್ ಕಂಪನಿಯಲ್ಲಿ ಉತ್ತಮ ಸಂಬಳದ ಉದ್ಯೋಗ ದೊರೆಯಿತು. ಆದರೆ, ಆರಾಮದಾಯಕ ಜೀವನಕ್ಕಿಂತ ಸಮಾಜಕ್ಕೆ ಸೇವೆ ಸಲ್ಲಿಸುವ ಕನಸೇ ಅವರಿಗೆ ಮುಖ್ಯವಾಗಿತ್ತು. ಹೀಗಾಗಿ ಅವರು ಉತ್ತಮ ವೇತನದ ಉದ್ಯೋಗಕ್ಕೆ ರಾಜೀನಾಮೆ ನೀಡಿ ಯುಪಿಎಸ್ಸಿ ಪರೀಕ್ಷೆಗೆ ಸಂಪೂರ್ಣ ಗಮನ ಹರಿಸಿದರು.
ಮೊದಲ ಪ್ರಯತ್ನದಲ್ಲೇ ಅವರು ಅಖಿಲ ಭಾರತ 284ನೇ ರ್ಯಾಂಕ್ (AIR 284) ಪಡೆದು ಇಂಡಿಯನ್ ಡಿಫೆನ್ಸ್ ಎಸ್ಟೇಟ್ಸ್ ಸರ್ವಿಸ್ (IDES)ಗೆ ಆಯ್ಕೆಯಾದರು. ಆದರೂ ಅವರ ಗುರಿ ಐಎಎಸ್ ಆಗಿದ್ದರಿಂದ ಅಲ್ಲೇ ನಿಲ್ಲಲಿಲ್ಲ.
ಸೇವೆಯಲ್ಲಿದ್ದಾಗಲೇ ಮತ್ತಷ್ಟು ಪರಿಶ್ರಮ ಪಟ್ಟು, 2023ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ 69ನೇ ರ್ಯಾಂಕ್ (AIR 69) ಗಳಿಸುವ ಮೂಲಕ ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸಾಗಿಸಿಕೊಂಡರು.
ಪ್ರಿಯಾ ರಾಣಿ ಅವರ ಯಶೋಗಾಥೆ, ಉತ್ತಮ ಅವಕಾಶಗಳನ್ನು ಬಿಟ್ಟು ದೊಡ್ಡ ಕನಸಿನ ಹಿಂದೆ ಹೋದರೆ ಪರಿಶ್ರಮಕ್ಕೆ ಖಂಡಿತ ಫಲ ಸಿಗುತ್ತದೆ ಎಂಬುದನ್ನು ಸಾಬೀತುಪಡಿಸಿದೆ. ಅವರ ಸಾಧನೆ ಇಂದು ಲಕ್ಷಾಂತರ ಯುಪಿಎಸ್ಸಿ ಅಭ್ಯರ್ಥಿಗಳಿಗೆ ಸ್ಪೂರ್ತಿಯಾಗಿದೆ.