ಬೆಂಗಳೂರು,ಜೂ. 11 (DaijiworldNews/AK): ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಚಾರ ರಹಿತ ಆಡಳಿತ ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಇತ್ತು. ಹತ್ತು ವರ್ಷದ ಯುಪಿಎ ಸರ್ಕಾರದ ಆಡಳಿತದಿಂದ ದೇಶದ ಜನ ಬೇಸತ್ತಿದ್ದರು. ಇದಕ್ಕೆಲ್ಲ ಪರಿಹಾರವೆಂಬಂತೆ ನರೇಂದ್ರ ಮೋದಿ ಜೀ ಅವರು ದೇಶದ ಚುಕ್ಕಾಣಿ ಹಿಡಿದು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದು ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ, ಕೋಟ್ಯಂತರ ಯುವಕರು ಭವಿಷ್ಯ ಕಟ್ಟಿಕೊಡಲು ಅಸಾಧ್ಯ ಎಂಬ ಸ್ಥಿತಿ ಇತ್ತು. ಆದರೆ ಮೋದಿ ಅವರು ನೇತೃತ್ವ ವಹಿಸಿಕೊಂಡ ನಂತರ ಭಾರತ ವಿಶ್ವದಲ್ಲೇ ಬಲಿಷ್ಠ ದೇಶವಾಗಿ ಬದಲಾಗಿದೆ ಎಂದು ಹೇಳಿದರು.
ಯುಪಿಎ ಆಡಳಿತದಲ್ಲಿ ಯಾವುದೇ ಅಭಿವೃದ್ಧಿ ಇಲ್ಲದೆ 2ಜಿ ಹಗರಣ, ಬೋಪರ್ಸ್, ಕಾಮನ್ ವೆಲ್ತ್ ಹಗರಣ ಸೇರಿ 12 ಲಕ್ಷ ಕೋಟಿಗೂ ಹೆಚ್ಚು ಹಗರಣ ನಡೆದಿತ್ತು. ಆದರೆ ಇಂದು ಮೋದಿ ಅವರ ಆಡಳಿತದಲ್ಲಿ ಒಂದೇ ಒಂದು ಹಗರಣ ನಡೆದಿಲ್ಲ. ಇದೂ ದಾಖಲೆಯಾಗಿದೆ ಎಂದು ವಿವರಿಸಿದರು.
ಮೋದಿ ಅವರ ಆಡಳಿತದ ದಿನಗಳು ಸುವರ್ಣಾಕ್ಷರದಲ್ಲಿ ಬರೆದಿಡುವಂತಾಗಿದೆ. ದೀರ್ಘಕಾಲ ನಿರಂತರವಾಗಿ ಆಡಳಿತ ನಡೆಸಿದ ಪ್ರಧಾನಿ ಎಂಬ ಬಿರುದು ಮೋದಿ ಜೀ ಅವರದ್ದಾಗಿದೆ. ನೆಹರು ಅವರ ದಾಖಲೆ ಮುರಿದಿರುವುದು ಮಾತ್ರ ದಾಖಲೆ ಅಲ್ಲ. ಮೋದಿ ಅವರಿಗೆ ಇದ್ದ ಆಡಳಿತ ಅನುಭವವೂ ದಾಖಲೆಯಾಗಿದೆ. ಗುಜರಾತ್ ಮುಖ್ಯಮಂತ್ರಿಗಳಾಗಿಯೂ ಅವರು ಅಪಾರ ಅನುಭವ ಹೊಂದಿದ್ದರು ಎಂದು ವಿವರಿಸಿದರು.
2014 ರಲ್ಲಿ ಮೋದಿ ಅವರು, ದೇಶದ ಮುಂದಿದ್ದ ಸವಾಲನ್ನು ಸ್ವೀಕರಿಸಿ ಭಾರತಕ್ಕೆ ಉಜ್ವಲ ಭವಿಷ್ಯ ಇದೆ. ಭ್ರಷ್ಟಚಾರರಹಿತ ಆಡಳಿತ ನೀಡಲು ಸಾಧ್ಯ. ಜಗತ್ತಿನ ಭೂಪಟದಲ್ಲಿ ಭಾರತಕ್ಕೆ ಸ್ಥಾನ ನೀಡಬಲ್ಲೆವು ಎಂಬುದನ್ನು ಸಾಬೀತು ಮಾಡಿದರು. 12 ವರ್ಷದಲ್ಲಿ ಎನ್ಡಿಎ ಸರ್ಕಾರ ಮಾಡಿದ ಆಮೂಲಾಗ್ರ ಬದಲಾವಣೆಗಳು ಸಾಕಷ್ಟು ಇವೆ. ಜಾಗತಿಕ ಸವಾಲುಗಳ ನಡುವೆ ಭಾರತ ವಿಶ್ವದ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಮೋದಿ ಅವರ ಇಚ್ಛಾಶಕ್ತಿಯಿಂದ ಇದೆಲ್ಲ ಸಾಧ್ಯವಾಗಿದೆ. ದೇಶದ ಪ್ರಧಾನ ಸೇವಕ ಅನ್ನುವ ಭಾವನೆಯಿಂದ ಒಂದು ದಿನವೂ ವಿಶ್ರಾಂತಿ ಪಡೆಯದೆ ಮೋದಿ ಅವರು ದುಡಿಯುತ್ತಿದ್ದಾರೆ ಎಂದರು.
ದೇಶದಲ್ಲಿರುವುದು ನಾಲ್ಕು ಜಾತಿ ಮಾತ್ರ. ಅವರು ಬಡವರು, ರೈತರು, ಮಹಿಳೆಯರು ಮತ್ತು ಯುವಕರು. ಅವರಿಗಾಗಿ ವಿವಿಧ ರೀತಿಯ ಕಾರ್ಯಕ್ರಮ ನೀಡಿ ಸರ್ವ ರಂಗದಲ್ಲಿ ಅಭಿವೃದ್ಧಿ ಸಾಧಿಸಲಾಗಿದೆ. ದೇಶದ 140 ಕೋಟಿ ನಾಗರಿಕರಿಗೆ ಮೋದಿ ಅವರ ನಾಯಕತ್ವದ ಬಗ್ಗೆ ವಿಶ್ವಾಸ ಬಂದಿದೆ. ಜಾಗತಿಕ ಕುಸಿತದ ನಡುವೆ ಭಾರತ ಹೆಚ್ಚಿನ ಅಭಿವೃದ್ಧಿ ದಾಖಲಿಸಿದೆ ಎಂದು ತಿಳಿಸಿದರು.
ಮೋದಿಜಿ ಅವರು ರಕ್ಷಣಾ ಕ್ಷೇತ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದರು. ಈ ಹಿಂದೆ ರಕ್ಷಣಾ ಆಮದಿಗೆ ಒತ್ತು ನೀಡಿದ್ದರು. ಆದರೀಗ ರಕ್ಷಣಾ ಕ್ಷೇತ್ರಕ್ಕೆ ಬಜೆಟ್ ಹಂಚಿಕೆ ಶೇ 165 ರಷ್ಟು ಹೆಚ್ಚಳವಾಗಿದೆ. ರಕ್ಷಣಾ ಉಪಕರಣಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಈ ಕ್ಷೇತ್ರದಲ್ಲಿ ಆತ್ಮನಿರ್ಭರ ಸಾಧಿಸಲಾಗುತ್ತಿದೆ ಎಂದರು.