ತಿರುವಲ್ಲಾ, ಜೂ. 11 (DaijiworldNews/TA): ನಿಗದಿತ ಸಮಯಕ್ಕಿಂತ ಮುಂಚೆಯೇ ಬಸ್ ಹೊರಟು ಪ್ರಯಾಣಿಕರಿಗೆ ತೊಂದರೆ ಉಂಟುಮಾಡಿದ ಪ್ರಕರಣದಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಗೆ ಗ್ರಾಹಕ ನ್ಯಾಯಾಲಯವು ರೂ. 35,000 ಪರಿಹಾರ ನೀಡುವಂತೆ ಆದೇಶಿಸಿದೆ.

ಸಮಯಕ್ಕಿಂತ ಮೊದಲೇ ಮಧ್ಯಂತರ ನಿಲ್ದಾಣದಿಂದ ಬಸ್ ತೆಗೆದುಕೊಂಡು ಹೋಗುವುದು ‘ಸೇವಾ ಲೋಪ’ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಮಹಿಳಾ ಪ್ರಯಾಣಿಕರ ಪರವಾಗಿ ಮಹತ್ವದ ತೀರ್ಪು ನೀಡಿದೆ.
ಏನಿದು ಪ್ರಕರಣ?: 2024ರ ಆಗಸ್ಟ್ 24ರಂದು ಮಹಿಳೆಯೊಬ್ಬರು ಕಟ್ಟಾಕಡಾದಿಂದ ಎರ್ನಾಕುಲಂನ ಆಸ್ಪತ್ರೆಗೆ ತೆರಳಲು ಕೆಎಸ್ಆರ್ಟಿಸಿ ಸೂಪರ್ ಫಾಸ್ಟ್ ಬಸ್ನಲ್ಲಿ ಮುಂಗಡ ಸೀಟು ಕಾಯ್ದಿರಿಸಿದ್ದರು. ತಿರುವಲ್ಲಾದಿಂದ ಬೆಳಗ್ಗೆ 8 ಗಂಟೆಗೆ ಬಸ್ ಹೊರಡಬೇಕಾಗಿತ್ತು. ಮಧ್ಯಾಹ್ನ 12.30ಕ್ಕೆ ವೈದ್ಯರ ಅಪಾಯಿಂಟ್ಮೆಂಟ್ ಇದ್ದ ಕಾರಣ, ಅವರು ಮುಂಚಿತವಾಗಿ ರೂ. 500 ಶುಲ್ಕ ಪಾವತಿಸಿ ಬುಕ್ಕಿಂಗ್ ಮಾಡಿಕೊಂಡಿದ್ದರು.
ಮಹಿಳೆ ಬೆಳಗ್ಗೆ 7.30ರಲ್ಲೇ ಬಸ್ ನಿಲ್ದಾಣಕ್ಕೆ ಬಂದು ಕಾಯುತ್ತಿದ್ದರು. ಆದರೆ 8.10 ಆದರೂ ಬಸ್ ಕಾಣಿಸದಿದ್ದರಿಂದ ಸಿಬ್ಬಂದಿಗೆ ಕರೆ ಮಾಡಿದ್ದರು. ಆಗ ಬಸ್ ಈಗಾಗಲೇ ತಿರುವಲ್ಲಾ ದಾಟಿ ಕೊಟ್ಟಾಯಂ ತಲುಪಿದೆ ಎಂದು ತಿಳಿಸಲಾಗಿತ್ತು. ಜೊತೆಗೆ “ಬೇರೆ ಬಸ್ನಲ್ಲಿ ಬನ್ನಿ” ಎಂದು ಸಿಬ್ಬಂದಿ ಪ್ರತಿಕ್ರಿಯಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಸ್ ಸಿಗದ ಕಾರಣ ಮಹಿಳೆಗೆ ಆಸ್ಪತ್ರೆಗೆ ತೆರಳಲು ಸಾಧ್ಯವಾಗಲಿಲ್ಲ. ಇದರಿಂದ ವೈದ್ಯರಿಗಾಗಿ ಪಾವತಿಸಿದ್ದ ಶುಲ್ಕ ವ್ಯರ್ಥವಾಗಿದ್ದು, ಮತ್ತೊಂದು ದಿನ ಆಸ್ಪತ್ರೆಗೆ ತೆರಳಲು ಕಚೇರಿಯಿಂದ ರಜೆ ಪಡೆಯಬೇಕಾಯಿತು. ಪರಿಣಾಮವಾಗಿ ಆರ್ಥಿಕ ನಷ್ಟದ ಜೊತೆಗೆ ಮಾನಸಿಕ ಕಿರಿಕಿರಿಯನ್ನೂ ಅನುಭವಿಸಬೇಕಾಯಿತು.
ಪ್ರಕರಣದ ವಿಚಾರಣೆಯಲ್ಲಿ ಕೆಎಸ್ಆರ್ಟಿಸಿ, ಕಂಡಕ್ಟರ್ ಬಳಿ ಮೀಸಲಾತಿ ಪಟ್ಟಿ ಇತ್ತು ಹಾಗೂ ಪ್ರಕರಣದಲ್ಲಿ ಕಂಡಕ್ಟರ್ರನ್ನು ಪಕ್ಷಕಾರರನ್ನಾಗಿ ಮಾಡಿಲ್ಲ ಎಂಬ ತಾಂತ್ರಿಕ ವಾದಗಳನ್ನು ಮುಂದಿಟ್ಟಿತು. ಅಲ್ಲದೆ ಇದು ಸೇವಾ ಲೋಪವಲ್ಲ ಎಂದು ವಾದಿಸಿತು. ಆದರೆ ನ್ಯಾಯಾಲಯ ಈ ವಾದಗಳನ್ನು ತಿರಸ್ಕರಿಸಿ, ನಿಗದಿತ ಸಮಯಕ್ಕೂ ಮುನ್ನ ಬಸ್ ಹೊರಡಿಸುವ ಮೂಲಕ ಪ್ರಯಾಣಿಕರ ಹಕ್ಕುಗಳಿಗೆ ಧಕ್ಕೆ ಉಂಟುಮಾಡಲಾಗಿದೆ ಎಂದು ಅಭಿಪ್ರಾಯಪಟ್ಟಿತು.
ಪ್ರಯಾಣಿಕೆಗೆ ಉಂಟಾದ ಆರ್ಥಿಕ ನಷ್ಟ, ಮಾನಸಿಕ ವೇದನೆ ಹಾಗೂ ಸೇವಾ ಲೋಪವನ್ನು ಪರಿಗಣಿಸಿದ ನ್ಯಾಯಾಲಯ, ಕೆಎಸ್ಆರ್ಟಿಸಿ ಸಂಸ್ಥೆಗೆ ರೂ. 35,000 ಪರಿಹಾರ ಪಾವತಿಸುವಂತೆ ಆದೇಶಿಸಿದೆ.