ನವದೆಹಲಿ, ಜೂ. 11 (DaijiworldNews/TA): ಭಾರತದಲ್ಲಿ ನಿರ್ಮಿಸಲಾದ ಮೊದಲ C-295 ಮಿಲಿಟರಿ ಸಾರಿಗೆ ವಿಮಾನ ತನ್ನ ಪ್ರಥಮ ಪರೀಕ್ಷಾ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಇದನ್ನು ಭಾರತೀಯ ವಾಯುಪಡೆ (IAF) ಮಹತ್ವದ ಸಾಧನೆ ಎಂದು ಬಣ್ಣಿಸಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ವಾಯುಪಡೆ, ದೇಶೀಯ ಉತ್ಪಾದನೆಯ ಮೊದಲ C-295 ವಿಮಾನದ ಯಶಸ್ವಿ ಹಾರಾಟದ ಹಿಂದೆ ಶ್ರಮಿಸಿದ ಸಂಪೂರ್ಣ ತಂಡಕ್ಕೆ ಅಭಿನಂದನೆ ಸಲ್ಲಿಸಿದೆ. ಭಾರತೀಯ ವಾಯುಪಡೆಯು ಸುಮಾರು ರೂ. 21,935 ಕೋಟಿ ವೆಚ್ಚದಲ್ಲಿ 56 C-295 ಸಾರಿಗೆ ವಿಮಾನಗಳನ್ನು ಖರೀದಿಸುತ್ತಿದ್ದು, ಈ ಯೋಜನೆ ದೇಶದ ರಕ್ಷಣಾ ವಲಯದಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಮೊದಲ 16 ವಿಮಾನಗಳನ್ನು ಸ್ಪೇನ್ನಿಂದ ಪೂರೈಸಲಾಗುತ್ತಿದ್ದು, ಉಳಿದ 40 ವಿಮಾನಗಳನ್ನು ಗುಜರಾತ್ನ ವಡೋದರಾದಲ್ಲಿರುವ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (TASL) ಮತ್ತು ಏರ್ಬಸ್ ಸಹಭಾಗಿತ್ವದಲ್ಲಿ ಭಾರತದಲ್ಲೇ ತಯಾರಿಸಲಾಗುತ್ತಿದೆ.
ಈ ಸಾಧನೆ ಕುರಿತು ಪ್ರತಿಕ್ರಿಯಿಸಿರುವ ಐಎಎಫ್, “ಭಾರತ ನಿರ್ಮಿತ ಮೊದಲ C-295 ವಿಮಾನದ ಯಶಸ್ವಿ ಹಾರಾಟವು ದೇಶದ ಏರೋಸ್ಪೇಸ್ ಕ್ಷೇತ್ರದ ಬೆಳೆಯುತ್ತಿರುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಅಲ್ಲದೆ, ಆತ್ಮನಿರ್ಭರ ಭಾರತದ ಪರಿಕಲ್ಪನೆಯಡಿ ದೇಶೀಯ ರಕ್ಷಣಾ ಉತ್ಪಾದನೆಯನ್ನು ಉತ್ತೇಜಿಸುವ ಭಾರತೀಯ ವಾಯುಪಡೆಯ ಬದ್ಧತೆಯನ್ನು ಇದು ಮತ್ತಷ್ಟು ಬಲಪಡಿಸುತ್ತದೆ” ಎಂದು ತಿಳಿಸಿದೆ. C-295 ವಿಮಾನಗಳು ಹಳೆಯ ಅವ್ರೋ (Avro) ಸಾರಿಗೆ ವಿಮಾನಗಳ ಸ್ಥಾನವನ್ನು ಭರಿಸಲಿದ್ದು, ಸೈನಿಕರು, ಯುದ್ಧೋಪಕರಣಗಳು ಹಾಗೂ ಪರಿಹಾರ ಸಾಮಗ್ರಿಗಳ ಸಾಗಣೆಯಲ್ಲಿ ಪ್ರಮುಖ ಪಾತ್ರವಹಿಸಲಿವೆ.