ನವದೆಹಲಿ, ಜೂ. 11 (DaijiworldNews/TA): ದೇಶದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ಸಿ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಾವಿರಾರು ಅಭ್ಯರ್ಥಿಗಳು ವರ್ಷಗಳ ಕಾಲ ಶ್ರಮಿಸುತ್ತಾರೆ. ಅಂತಹ ಅಭ್ಯರ್ಥಿಗಳಿಗೆ ಸ್ಫೂರ್ತಿಯಾಗುವ ಕಥೆಯೇ ಒಡಿಶಾದ ಐಎಎಸ್ ಅಧಿಕಾರಿ ಕಸ್ತೂರಿ ಪಾಂಡ ಅವರದ್ದು.

2022ರ ಯುಪಿಎಸ್ಸಿ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಕಸ್ತೂರಿ ಪಾಂಡಾ ಅಖಿಲ ಭಾರತ 67ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾಗಿದ್ದರು. ವಿಶೇಷವೆಂದರೆ, ಅವರು ಯಾವುದೇ ಕೋಚಿಂಗ್ ಪಡೆಯದೆ ಸ್ವಯಂ ಅಧ್ಯಯನದ ಮೂಲಕ ಈ ಸಾಧನೆ ಮಾಡಿದ್ದಾರೆ.
ಕಸ್ತೂರಿ ಪಾಂಡಾ ಒಡಿಶಾ ಮೂಲದವರಾಗಿದ್ದು, ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ರೂರ್ಕೆಲಾ (NIT ರೌರ್ಕೆಲಾ)ಯಿಂದ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಯುಪಿಎಸ್ಸಿ ಪರೀಕ್ಷೆಯಲ್ಲಿ ಇದು ಅವರ ಎರಡನೇ ಪ್ರಯತ್ನವಾಗಿತ್ತು. ಮೊದಲ ಪ್ರಯತ್ನದಲ್ಲೇ ಅವರು ಸಂದರ್ಶನ ಹಂತದವರೆಗೆ ತಲುಪಿದ್ದರು. ಆದರೆ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ. ಇದರಿಂದ ನಿರಾಶರಾಗದೆ ತಮ್ಮ ದುರ್ಬಲತೆಗಳನ್ನು ಗುರುತಿಸಿ ಮತ್ತಷ್ಟು ಶ್ರಮಿಸಿದರು. ಪರಿಣಾಮವಾಗಿ ಎರಡನೇ ಪ್ರಯತ್ನದಲ್ಲಿ 822 ಅಂಕಗಳನ್ನು ಗಳಿಸಿ 67ನೇ ರ್ಯಾಂಕ್ನೊಂದಿಗೆ ಯಶಸ್ಸು ಸಾಧಿಸಿದರು.
ಯುಪಿಎಸ್ಸಿಗೆ ತಯಾರಿ ನಡೆಸುವವರು ಮೂಲಭೂತ ವಿಷಯಗಳ ಮೇಲೆ ಹೆಚ್ಚು ಗಮನ ಹರಿಸಬೇಕು ಎಂದು ಕಸ್ತೂರಿ ಸಲಹೆ ನೀಡುತ್ತಾರೆ. ಅವರು 9ರಿಂದ 12ನೇ ತರಗತಿಯ NCERT ಪಠ್ಯಪುಸ್ತಕಗಳನ್ನು ಆಳವಾಗಿ ಅಧ್ಯಯನ ಮಾಡಿ ಮೂಲಭೂತ ಜ್ಞಾನವನ್ನು ಬಲಪಡಿಸಿಕೊಂಡಿದ್ದರು. ಅಭ್ಯಾಸ ಪರೀಕ್ಷೆಗಳಿಗೆ ಅವರು ಹೆಚ್ಚಿನ ಮಹತ್ವ ನೀಡಿದ್ದರು. 2020ರ ಪ್ರಿಲಿಮ್ಸ್ ಪರೀಕ್ಷೆಗೆ ಮುನ್ನ ಸುಮಾರು 50 ವಿಷಯಾಧಾರಿತ ಹಾಗೂ 50 ಪೂರ್ಣಾವಧಿಯ ಮಾಕ್ ಟೆಸ್ಟ್ಗಳನ್ನು ಬರೆದಿದ್ದರು. 2022ರ ಪ್ರಯತ್ನದಲ್ಲಿಯೂ ಸುಮಾರು 30 ಪೂರ್ಣಾವಧಿ ಪರೀಕ್ಷೆಗಳನ್ನು ಬರೆದು ತಮ್ಮ ತಯಾರಿಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದರು.
ಕಸ್ತೂರಿ ಪಾಂಡಾ ಅವರ ಪ್ರಕಾರ, ಕೇವಲ ಹೆಚ್ಚು ಸಮಯ ಓದುವುದಕ್ಕಿಂತ ‘ಸ್ಮಾರ್ಟ್ ಸ್ಟಡಿ’ ಮಾಡುವುದು ಮುಖ್ಯ. ಪಠ್ಯಕ್ರಮವನ್ನು ಯೋಜಿತವಾಗಿ ಪೂರ್ಣಗೊಳಿಸುವುದರ ಜೊತೆಗೆ ನಿಯಮಿತವಾಗಿ ಮಾಕ್ ಟೆಸ್ಟ್ ಬರೆಯುವುದು ಯಶಸ್ಸಿನ ಪ್ರಮುಖ ಅಂಶವಾಗಿದೆ. ಎರಡು ಗಂಟೆಗಳ ಅವಧಿಯಲ್ಲಿ 90ರಿಂದ 94 ಪ್ರಶ್ನೆಗಳನ್ನು ಉತ್ತರಿಸುವ ಗುರಿ ಹೊಂದಿದ್ದ ಅವರು, ಸಮಯ ನಿರ್ವಹಣೆ ಮತ್ತು ನಿರಂತರ ಅಭ್ಯಾಸದ ಮೂಲಕ ಯುಪಿಎಸ್ಸಿ ಕನಸನ್ನು ನನಸಾಗಿಸಿಕೊಂಡಿದ್ದಾರೆ.