ಬೆಂಗಳೂರು, ಜೂ. 10 (DaijiworldNews/AA): ಒಂದು ರಾಜ್ಯಸಭೆ ಸ್ಥಾನದಿಂದ ನನ್ನ, ಮೋದಿ ಅವರ ಸಂಬಂಧ ಮುಕ್ತಾಯ ಆಗೋದಿಲ್ಲ. ನನ್ನ ಅಂತಿಮ ಕಾಲದವರೆಗೂ ನನ್ನ ಮೋದಿ ಅವರು ಸಂಬಂಧ ಇರುತ್ತದೆ. ಎನ್ಡಿಎ ಜೊತೆ ನಾವು ಮುಂದುವರೆಯುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹೇಳಿದ್ದಾರೆ.

ದೇವೇಗೌಡರಿಗೆ ಬಿಜೆಪಿ ರಾಜ್ಯಸಭೆ ಸೀಟು ಕೊಡದ್ದಕ್ಕೆ ಕಾಂಗ್ರೆಸ್ ಟೀಕೆ ಮಾಡುತ್ತಿರುವ ಹಿನ್ನೆಲೆ ಬಿಜೆಪಿ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, "ನನಗೆ ರಾಜ್ಯಸಭೆ ಸದಸ್ಯನಾಗಿ ಮುಂದುವರೆಯಬೇಕಾಗಿದ್ರೆ ದೆಹಲಿಯಲ್ಲಿ ಬಿಜೆಪಿ ಕೇಂದ್ರದ ನಾಯಕರನ್ನ ಭೇಟಿಯಾಗಿ ಮಾತಾಡುತ್ತಿದ್ದೆ. ಆದರೆ ನಾನು ಯಾವತ್ತೂ ಕೇಂದ್ರದ ನಾಯಕರ ಜೊತೆ ಈ ವಿಚಾರವಾಗಿ ಮಾತೇ ಆಡಿಲ್ಲ" ಎಂದರು.
"10 ವರ್ಷಗಳಿಂದ ವೈಯಕ್ತಿಕವಾಗಿ ನನ್ನ ಮತ್ತು ಮೋದಿ ಸಂಬಂಧವಿದೆ. ಒಂದು ರಾಜ್ಯಸಭೆ ಸ್ಥಾನಕೋಸ್ಕರ ಆ ಸಂಬಂಧ ಕಡಿದುಕೊಳ್ಳಲ್ಲ. ವಿದೇಶಿದಲ್ಲಿ ನಾಯಕ ಅಂತ ಮೋದಿ ಅವರನ್ನು ಗುರುತಿಸಿದ್ದಾರೆ. ಮೋದಿಗೆ ಹೊರ ದೇಶದಲ್ಲಿ ಎತ್ತರದ ಸ್ಥಾನ ಇದೆ. ಆ ರೀತಿ ಬೆಳೆದ ವ್ಯಕ್ತಿ ಯಾರೂ ಇಲ್ಲ. ವೈಯಕ್ತಿಕವಾಗಿ ಮೋದಿ ಜೊತೆ ಸಂಬಂಧ ಇದೆ. ನಾನು ರಾಜ್ಯಸಭೆ ಸದಸ್ಯ ಆಗದೇ ಇದ್ದರು ಆ ಸಂಬಂಧ ಇರುತ್ತದೆ. ರಾಜ್ಯದ ಯಾವುದೇ ಸಮಸ್ಯೆ ಆದರೂ ನಾನು ಮೋದಿಯವರನ್ನ ಭೇಟಿ ಆಗುತ್ತೇನೆ. ಪತ್ರ ಬರೆಯುತ್ತೇನೆ. ನನ್ನ ಜೀವನದ ಕೊನೆ ಘಟ್ಟದವರೆಗೂ ಮೈತ್ರಿ ಮುಂದುವರೆಸಿಕೊಂಡು ಹೋಗುತ್ತೇನೆ" ಎಂದು ತಿಳಿಸಿದರು.
"ಒಂದು ರಾಜ್ಯಸಭೆ ಸ್ಥಾನದಿಂದ ನನ್ನ ಮೋದಿ ಸಂಬಂಧ ಕಡಿದು ಹೋಗುತ್ತದೆ ಅಂತ ದೇಶದ, ರಾಜ್ಯದ ಜನರು ಅಂದುಕೊಳ್ಳಬಾರದು. ಹೀಗಾಗಿ ನಾನು ಸ್ಪಷ್ಟಪಡಿಸುತ್ತಿದ್ದೇನೆ. ನಾವು ಎನ್ಡಿಎ ಜೊತೆಗೆ ಇರುತ್ತೇವೆ. ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ಕೇಂದ್ರ ಸಚಿವರಾಗಿ ಮುಂದುವರೆಯುತ್ತಾರೆ" ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.