ಕೊಲ್ಕತ್ತಾ, ಜೂ. 10 (DaijiworldNews/AA): ನಾನು ಎರಡು ದೋಣಿ ಮೇಲೆ ಕಾಲಿಟ್ಟು ಪ್ರಯಾಣಿಸಲು ಬಯಸುವುದಿಲ್ಲ. ರಾಜೀನಾಮೆಯ ನಂತರ ತಾವು ರಾಜಕೀಯವಾಗಿ ಸ್ವತಂತ್ರರಾಗಿದ್ದೇನೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ರಾಜೀನಾಮೆ ನೀಡಿ ರಾಜ್ಯಸಭಾ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ ಮಾಜಿ ಸಂಸದೆ ಸುಶ್ಮಿತಾ ದೇವ್ ತಿಳಿಸಿದ್ದಾರೆ.

ರಾಜೀನಾಮೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ನಿರ್ಧಾರಕ್ಕೆ ಕಾರಣವಾದದ್ದು ಬಹಳ ದೀರ್ಘ ಕಥೆ. ರಾಜಕೀಯದಲ್ಲಿ ಪ್ರತಿಯೊಂದು ವಿಷಯವನ್ನೂ ಬಹಿರಂಗಪಡಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಇಂದು ನಾನು ಸ್ವತಂತ್ರ ಮಹಿಳೆ. ನಾನು ಬಹಳ ವರ್ಷಗಳಿಂದ ಹಿಮಂತ ಬಿಸ್ವ ಶರ್ಮ ಅವರನ್ನು ತಿಳಿದಿದ್ದೇನೆ. ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದ್ದೇನೆ" ಎಂದು ಹೇಳಿದರು.
"ಪಕ್ಷದೊಳಗೆ ಯಾರು ಏನು ಮಾಡುತ್ತಿದ್ದಾರೆ ಎಂಬ ಮಾಹಿತಿ ನನಗಿಲ್ಲ. ನಾನು ಅಸ್ಸಾಂನವಳಾಗಿರುವುದರಿಂದ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ನೇರವಾಗಿ ತೊಡಗಿಸಿಕೊಂಡಿಲ್ಲ. ನಾನು ಮಮತಾ ಬ್ಯಾನರ್ಜಿ ಅವರ ವಿರುದ್ಧ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ" ಎಂದರು.
"ಅಸ್ಸಾಂ ನನ್ನ ರಾಜ್ಯ. ತಮ್ಮ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುವ ಮೊದಲು ಸ್ವಲ್ಪ ಸಮಯ ಬೇಕಾಗಿದೆ. ನನ್ನ ವೈಯಕ್ತಿಕ ಹಾಗೂ ರಾಜಕೀಯ ಕಾರಣಗಳಿಗಾಗಿ ನಾನು ರಾಜೀನಾಮೆ ನೀಡಿದ್ದೇನೆ. ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಚಿಂತನೆಗಳನ್ನು ಬದಲಾಯಿಸಿಕೊಳ್ಳುವ ಹಕ್ಕಿದೆ. ಸದ್ಯಕ್ಕೆ ನಾನು ಇದಕ್ಕಿಂತ ಹೆಚ್ಚು ಏನನ್ನೂ ಹೇಳಲು ಸಾಧ್ಯವಿಲ್ಲ" ಎಂದು ನುಡಿದರು.