ಬಳ್ಳಾರಿ,ಜೂ. 10 (DaijiworldNews/AK): ಸ್ವತಂತ್ರ ಭಾರತದ ಇತಿಹಾಸದಲ್ಲಿ ಸತತವಾಗಿ ಅತಿ ದೀರ್ಘಾವಧಿಗೆ ಚುನಾಯಿತರಾದ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನರೇಂದ್ರ ಮೋದಿ ಅವರ ಐತಿಹಾಸಿಕ ಸಾಧನೆಯನ್ನು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಕುಟುಂಬ ವಿಶಿಷ್ಟವಾಗಿ ಸಂಭ್ರಮಿಸಿದೆ.

ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ತಮ್ಮ ಹುಟ್ಟುಹಬ್ಬದ ಸಂಭ್ರಮದ ಮಧ್ಯೆಯೇ, ಪ್ರಧಾನಿ ಮೋದಿಯವರ ಈ ದಾಖಲೆಯನ್ನು ಗೌರವಿಸುವ ಸಲುವಾಗಿ ತಮ್ಮ ಕೈಯಲ್ಲಿ ನರೇಂದ್ರ ಮೋದಿಯವರ ಭಾವಚಿತ್ರದ ಮೆಹಂದಿ (ಮದರಂಗಿ) ಬಿಡಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಬಳ್ಳಾರಿ ನಗರದ ಸ್ವಗೃಹದಲ್ಲಿ ಲಕ್ಷ್ಮಿ ಅರುಣಾ ಈ ಬಾರಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ಇದೇ ಸುಸಂದರ್ಭದಲ್ಲಿ ದೇಶದಲ್ಲಿ ನರೇಂದ್ರ ಮೋದಿಯವರು ಸತತವಾಗಿ ಅತಿ ದೀರ್ಘಾವಧಿಯ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ಐತಿಹಾಸಿಕ ಮೈಲಿಗಲ್ಲನ್ನು ತಲುಪಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಅವರು, ಹಸ್ತದ ಮೇಲೆ ಭಾರತೀಯ ಜನತಾ ಪಕ್ಷದ ಸಂಕೇತವಾದ ಕಮಲದ ಚಿತ್ರ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ದೇಶದ ಹೆಮ್ಮೆಯ ಸಂಕೇತವಾಗಿ ‘75 ವರ್ಷ’ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಕರ್ಷಕ ಭಾವಚಿತ್ರವನ್ನು ಮೆಹಂದಿ ಮೂಲಕ ಬಿಡಿಸಿಕೊಂಡಿದ್ದಾರೆ.
ಲಕ್ಷ್ಮಿ ಅರುಣಾ ಕೈಯಲ್ಲಿ ಮೂಡಿರುವ ಈ ರಾಜಕೀಯ ಹಾಗೂ ದೇಶಭಕ್ತಿಯ ಮದರಂಗಿ ಚಿತ್ರದ ವಿಡಿಯೋವನ್ನು ಜನಾರ್ದನ ರೆಡ್ಡಿ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.