ಚೆನ್ನೈ, ಜೂ. 10 (DaijiworldNews/TA): ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಭಾರತಿರಾಜ ಇಂದು (ಜೂನ್ 10) ತಮ್ಮ 84ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚೆನ್ನೈನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಗ್ರಾಮೀಣ ಜೀವನದ ಸೊಗಡನ್ನು ಬೆಳ್ಳಿತೆರೆಗೆ ತಂದು ತಮಿಳು ಸಿನಿರಂಗದ ಕಥನ ಶೈಲಿಯನ್ನೇ ಬದಲಿಸಿದ ನಿರ್ದೇಶಕರಾಗಿ ಭಾರತಿರಾಜ ಗುರುತಿಸಿಕೊಂಡಿದ್ದರು. 1977ರಲ್ಲಿ ಬಿಡುಗಡೆಯಾದ 16 ವಯತಿನಿಲೆ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅವರು, ತಮ್ಮ ವಿಭಿನ್ನ ಕಥಾಹಂದರ ಹಾಗೂ ನೈಜ ನಿರೂಪಣೆಯ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು.
ತಮಿಳುನಾಡಿನ ತೇಣಿ ಜಿಲ್ಲೆಯ ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ಭಾರತಿರಾಜ, ಚಿತ್ರರಂಗಕ್ಕೆ ಬರುವ ಮುನ್ನ ಆರೋಗ್ಯ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಬಳಿಕ ಸಿನಿಮಾ ಮೇಲಿನ ಆಸಕ್ತಿಯಿಂದ ಚೆನ್ನೈಗೆ ಬಂದು ಸಹ ನಿರ್ದೇಶಕರಾಗಿ ಕೆಲಸ ಮಾಡಿ, ನಂತರ ದಕ್ಷಿಣ ಭಾರತದ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರಾಗಿ ಬೆಳೆದರು.
ಅವರ ನಿರ್ದೇಶನದ ಕಿಝಕ್ಕೆ ಪೋಗುಮ್ ರೈಲ್, ಸಿಗಪ್ಪು ರೋಜಕ್ಕಲ್, ಅಲೈಗಲ್ ಓಯ್ವತಿಲ್ಲೈ, ಮುದಲ್ ಮರಿಯಾಧೈ ಸೇರಿದಂತೆ ಹಲವು ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ್ದವು. ಅವರ ಸಾಧನೆಗಾಗಿ ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ಚಿತ್ರಕಥೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಆರು ರಾಷ್ಟ್ರ ಪ್ರಶಸ್ತಿಗಳು ದೊರೆತಿವೆ.
ಸುಮಾರು ಐದು ದಶಕಗಳ ಸಿನಿ ಪಯಣದಲ್ಲಿ ನಿರ್ದೇಶಕರಷ್ಟೇ ಅಲ್ಲದೆ ನಟ ಹಾಗೂ ಕಥೆಗಾರರಾಗಿಯೂ ಭಾರತಿರಾಜ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರ ಅಗಲಿಕೆಗೆ ಭಾರತೀಯ ಚಿತ್ರರಂಗದ ಗಣ್ಯರು, ಕಲಾವಿದರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.