ಆಲ್ಬನಿ, ಜೂ. 09 (DaijiworldNews/AK): ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನರಮೇಧ ನಡೆಯುತ್ತಿರುವ ಬೆನ್ನಲ್ಲೇ, ಅಘ್ಘಾನಿಸ್ತಾನದ ಮೇಲಿನ ದಾಳಿ ಪ್ರಸ್ತಾಪಿಸಿ ವಿಶ್ವಸಂಸ್ಥೆಯಲ್ಲಿ ಭಾರತ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ನರಮೇಧವನ್ನು ಸೇನಾ ಕಾರ್ಯಾಚರಣೆ ಎನ್ನಲಾಗಲ್ಲ. ದ್ವೇಷದ ಕಾರ್ಖಾನೆಯಿಂದ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಹತ್ಯಾಕಾಂಡವನ್ನು ಸೇನಾ ಕಾರ್ಯಾಚರಣೆ ಎಂದು ಬಣ್ಣಿಸಿದರೆ ಪಾಪ ಕಳೆಯುವುದಿಲ್ಲ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನವನ್ನು ಭಾರತ ತರಾಟೆಗೆ ತೆಗೆದುಕೊಂಡಿದೆ.
ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ಹರೀಶ್ ಪರ್ವತನೇನಿ ಮಾತನಾಡಿ, ಅಘ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸುತ್ತಿರುವ ಸೇನಾ ದಾಳಿಗಳಿಂದ ಅಪಾರ ಪ್ರಮಾಣದ ನಾಗರಿಕ ಸಾವು-ನೋವುಗಳು ಸಂಭವಿಸುತ್ತಿವೆ. ಇಂತಹ ಕ್ರಮಗಳು ಅಘ್ಘಾನಿಸ್ತಾನದ ಸಾರ್ವಭೌಮತ್ವಕ್ಕೆ ಧಕ್ಕೆ ತರುವುದರ ಜೊತೆಗೆ, ಇಡೀ ಪ್ರದೇಶದ ಶಾಂತಿ ಮತ್ತು ಸ್ಥಿರತೆಗೆ ಅಪಾಯ ಉಂಟುಮಾಡುತ್ತಿವೆ ಎಂದಿದ್ದಾರೆ.
ಸಾಮೂಹಿಕ ಹತ್ಯೆಯನ್ನು ಸೇನಾ ಕಾರ್ಯಾಚರಣೆ ಎಂದು ಕರೆಯುವುದರಿಂದ ತಪ್ಪಿತಸ್ಥರು ನಿರ್ದೋಷಿಗಳಾಗುವುದಿಲ್ಲ. ನಾಗರಿಕರನ್ನು ಕೊಲ್ಲುವುದು, ಗಾಯಗೊಳಿಸುವುದು ಮತ್ತು ಮಕ್ಕಳನ್ನು ಅನಾಥರನ್ನಾಗಿಸುವುದು ಯಾವುದೇ ರೀತಿಯ ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆ ಆಗಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.