ಕೋಲ್ಕತ್ತಾ, ಜೂ. 09 (DaijiworldNews/AK):ನಕಲಿ ಸಹಿ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನೆ ಮೇಲೆ ಸಿಐಡಿ (CID) ದಾಳಿ ನಡೆಸಿದೆ.

ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಪಕ್ಷದಲ್ಲಿ ವಿಭಜನೆಗೆ ಕಾರಣವಾದ ಶಾಸಕರ ನಕಲಿ ಸಹಿ ವಿವಾದದ ತನಿಖೆಗೆ ಸಂಬಂಧಿಸಿದಂತೆ ಸಿಐಡಿ, ಕೋಲ್ಕತ್ತಾದ ಮಮತಾ ಅವರ ಮನೆಗೆ ಎಂಟ್ರಿ ಕೊಟ್ಟಿದೆ.
ರಾಜ್ಯ ತನಿಖಾ ಸಂಸ್ಥೆಯ ಅಧಿಕಾರಿಗಳು, ಕಾಲಿಘಾಟ್ ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಯ ದೊಡ್ಡ ತುಕಡಿಯೊಂದಿಗೆ ಮಧ್ಯಾಹ್ನದ ಸುಮಾರಿಗೆ 30 ಬಿ ಹರೀಶ್ ಚಟರ್ಜಿ ಸ್ಟ್ರೀಟ್ನಲ್ಲಿರುವ ಪಕ್ಷದ ಕೇಂದ್ರ ಕಚೇರಿ ಮೇಲೂ ದಾಳಿ ನಡೆಸಲಾಗಿದೆ.
ವಿರೋಧ ಪಕ್ಷದ ನಾಯಕನ ಮಾನ್ಯತೆಗಾಗಿ ವಿಧಾನಸಭಾ ಸ್ಪೀಕರ್ಗೆ ಸಲ್ಲಿಸಲಾದ ಪ್ರಸ್ತಾವನೆಗೆ ತೃಣಮೂಲ ಶಾಸಕರ ಸಹಿಗಳನ್ನು ನಕಲಿ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಮಾಹಿತಿ ಕೋರಿ ಸಿಐಡಿ ನೋಟಿಸ್ ನೀಡಿತ್ತು. ಅದಾದ ಕೆಲವು ದಿನಗಳ ನಂತರ ಸಿಐಡಿ ಕ್ರಮಕೈಗೊಂಡಿದೆ.
ಏಜೆನ್ಸಿ ಹೊರಡಿಸಿದ ಈ ಹಿಂದಿನ ನೋಟಿಸ್ಗೆ ತೃಣಮೂಲ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸಲ್ಲಿಸಿದ ಉತ್ತರದ ಆಧಾರದ ಮೇಲೆ ಶೋಧ ನಡೆಸಲಾಗಿದೆ ಎಂದು ಸ್ಥಳದಲ್ಲಿ ಹಾಜರಿದ್ದ ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ʻದೀದಿʼಗೆ ದೊಡ್ಡ ಶಾಕ್ – ರಾಜ್ಯಸಭಾ ಸದಸ್ಯತ್ವಕ್ಕೆ ಸುಖೇಂದು ಶೇಖರ್, ಕೋಯೆಲ್ ಮಲ್ಲಿಕ್ ರಾಜೀನಾಮೆ
30 ಬಿ ಹರೀಶ್ ಚಟರ್ಜಿ ಸ್ಟ್ರೀಟ್ನಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಶಾಸಕರ ಸಹಿಗಳನ್ನು ಸಂಗ್ರಹಿಸಲಾಗಿದೆ ಎಂದು ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ. ಆ ಹೇಳಿಕೆಯ ಆಧಾರದ ಮೇಲೆ, ನಾವು ತನಿಖೆಯ ಭಾಗವಾಗಿ ಇಲ್ಲಿಗೆ ಬಂದಿದ್ದೇವೆ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.