ನವದೆಹಲಿ, ಜೂ. 09 (DaijiworldNews/TA): ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ನಲ್ಲಿ ನಡೆದ INDIA ಒಕ್ಕೂಟದ ಸಭೆಯ ಮರುದಿನ ಈ ಭೇಟಿ ನಡೆದಿದ್ದು, ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಟಿಎಂಸಿಯಲ್ಲಿ ಆಂತರಿಕ ಅಸಮಾಧಾನ ಮತ್ತು ಸಂಸದರ ಬಂಡಾಯದ ಸುದ್ದಿಗಳ ನಡುವೆ ಈ ಭೇಟಿ ವಿಶೇಷ ಮಹತ್ವ ಪಡೆದುಕೊಂಡಿದೆ.
ಮೂಲಗಳ ಪ್ರಕಾರ, ಮುಂಬರುವ ಸಂಸತ್ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಜಂಟಿ ಕಾರ್ಯತಂತ್ರ, INDIA ಒಕ್ಕೂಟದ ಬಲವರ್ಧನೆ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಸಮನ್ವಯದ ಹೋರಾಟ ಕುರಿತು ಇಬ್ಬರು ನಾಯಕಿಯರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಟಿಎಂಸಿಯೊಳಗೆ ಅಸಮಾಧಾನ ಹೆಚ್ಚಾಗಿರುವ ವರದಿಗಳು ಹೊರಬಿದ್ದಿವೆ. ಪಕ್ಷದ ಹಿರಿಯ ನಾಯಕಿ ಕಾಕೋಲಿ ಘೋಷ್ ದಸ್ತಿದಾರ್ ಸೇರಿದಂತೆ ಸುಮಾರು 20 ಲೋಕಸಭಾ ಸದಸ್ಯರು ದೆಹಲಿಯಲ್ಲಿ ಪ್ರತ್ಯೇಕ ಸಭೆ ನಡೆಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು, ಎನ್ಡಿಎ ಒಕ್ಕೂಟ ಸೇರುವ ಅಥವಾ ಪ್ರತ್ಯೇಕ ಬಣವಾಗಿ ಗುರುತಿಸುವ ಕುರಿತು ಮನವಿ ಸಲ್ಲಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.
ಅದೇ ರೀತಿ ಟಿಎಂಸಿ ಸಂಸದರಾದ ಪ್ರಸೂನ್ ಬ್ಯಾನರ್ಜಿ ಹಾಗೂ ಸತಾಬ್ದಿ ರಾಯ್ ಸೇರಿದಂತೆ ಕೆಲ ನಾಯಕರು ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಭೂಪೇಂದರ್ ಯಾದವ್ ಅವರ ನಿವಾಸದಲ್ಲಿ ಸಭೆ ನಡೆಸಿರುವುದು ಟಿಎಂಸಿ ನಾಯಕತ್ವಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ರಾಜಕೀಯ ಬೆಳವಣಿಗೆಗಳ ನಡುವೆಯೇ ಟಿಎಂಸಿಯ ಹಿರಿಯ ನಾಯಕ ಸುಖೇಂದು ಶೇಖರ್ ರೇ ತಮ್ಮ ರಾಜ್ಯಸಭಾ ಸದಸ್ಯತ್ವ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ನಡೆದ INDIA ಒಕ್ಕೂಟದ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಹಾಗೂ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ಸಭೆಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ, ಹಣದುಬ್ಬರ, ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ಹಾಗೂ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಕುರಿತಂತೆ ಚರ್ಚೆ ನಡೆಸಲಾಗಿದೆ. ಜೊತೆಗೆ ಪ್ರತಿ ಎರಡು ತಿಂಗಳಿಗೊಮ್ಮೆ ಸಮನ್ವಯ ಸಭೆ ನಡೆಸುವುದು ಮತ್ತು ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಒಂದೆಡೆ INDIA ಒಕ್ಕೂಟವನ್ನು ಬಲಪಡಿಸಲು ಮಮತಾ ಬ್ಯಾನರ್ಜಿ ಪ್ರಯತ್ನಿಸುತ್ತಿರುವಾಗ, ಮತ್ತೊಂದೆಡೆ ತಮ್ಮದೇ ಪಕ್ಷದಲ್ಲಿ ಅಸಮಾಧಾನ ಮತ್ತು ಬಂಡಾಯದ ವಾತಾವರಣ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಭೇಟಿಯನ್ನು ರಾಜಕೀಯ ವಲಯಗಳು ಮಹತ್ವದ ಬೆಳವಣಿಗೆಯಾಗಿ ನೋಡುತ್ತಿವೆ. ಪಶ್ಚಿಮ ಬಂಗಾಳ ಮತ್ತು ರಾಷ್ಟ್ರೀಯ ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ಹೊಸ ರಾಜಕೀಯ ಸಮೀಕರಣಗಳು ರೂಪುಗೊಳ್ಳುವ ಸಾಧ್ಯತೆ ಇದೆ ಎಂಬ ಚರ್ಚೆಗಳು ಜೋರಾಗಿವೆ.