ಬಿಹಾರ, ಜೂ. 09 (DaijiworldNews/AK): ವಿದ್ಯುತ್ ವ್ಯವಸ್ಥೆಯೂ ಸರಿಯಾಗಿ ಇಲ್ಲದ ಪರಿಸ್ಥಿತಿಯಲ್ಲಿ ಮೇನದ ದೀಪದ ಬೆಳಕಿನಲ್ಲಿ ಓದಿದ ಬಾಲಕ ಅನ್ಷುಮನ್ ರಾಜ್ , ನಂತರ ದೇಶದ ಅತ್ಯಂತ ಕಠಿಣ ಪರೀಕ್ಷೆಯಾದ ಯುಪಿಎಸ್ ಸಿ ಅನ್ನು ಉತ್ತೀರ್ಣನಾಗಿ ಐಎಎಸ್ ಅಧಿಕಾರಿಯಾಗಿದ್ದಾರೆ. ಅವರ ಸ್ಪೂರ್ತಿದಾಯಕ ಕಥೆ ತಿಳಿಯೋಣ.

ಬಿಹಾರದ ಅನ್ಷುಮನ್ ರಾಜ್ ಎಂಬ ಯುವಕ 2019ರಲ್ಲಿ ನಡೆದ ಯುಪಿಎಸ್ಸಿ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಆಲ್ ಇಂಡಿಯಾ ರ್ಯಾಂಕ್ 107 ಪಡೆದು ಗಮನ ಸೆಳೆದಿದ್ದಾರೆ.
ಅನ್ಷುಮನ್ ರಾಜ್ ಅವರ ಕಥೆ ಬಿಹಾರದ ಬಕ್ಸರ್ ಜಿಲ್ಲೆಯ ನವನಗರ ಬ್ಲಾಕ್ನಲ್ಲಿ ಆರಂಭವಾಗುತ್ತದೆ. ಅವರ ಬಾಲ್ಯ ಕಷ್ಟಗಳಿಂದ ತುಂಬಿತ್ತು. ಆರಂಭಿಕ ಶಿಕ್ಷಣದ ಸಮಯದಲ್ಲಿ ಅವರು ಸೀಮೆಎಣ್ಣೆ ದೀಪದ ಬೆಳಕಿನಲ್ಲಿ ಓದುತ್ತಿದ್ದರಂತೆ. ಕುಟುಂಬವು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿತ್ತು; ಅವರ ತಂದೆಯ ಅಕ್ಕಿ ಮಿಲ್ ವ್ಯವಹಾರ ನಷ್ಟ ಅನುಭವಿಸಿತ್ತು. ಮನೆಯ ಜವಾಬ್ದಾರಿಯನ್ನು, ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರ ತಾಯಿ ಹೊತ್ತರು. ಇಂತಹ ಪರಿಸ್ಥಿತಿಯಲ್ಲಿ ಯಶಸ್ಸು ಸ್ವಯಂವಾಗಿ ಬರದು. ಆದರೆ ರಾಜ್ ಅವರ ಜೀವನದಲ್ಲಿ ಈ ಕನಿಷ್ಟ ಸೌಲಭ್ಯಗಳ ಕೊರತೆ ಇತ್ತು. ಆದರೂ ಅವರು ಶಿಸ್ತು ಮತ್ತು ನಿರಂತರ ಅಭ್ಯಾಸವನ್ನು ತಮ್ಮ ಬಲವನ್ನಾಗಿ ಮಾಡಿಕೊಂಡು ಯಶಸ್ಸು ಕಂಡರು.
ಅವರು ಬಕ್ಸರ್ನ ಜವಾಹರ್ ನವೋದಯ ವಿದ್ಯಾಲಯದಲ್ಲಿ 10ನೇ ತರಗತಿ ತನಕ ಓದಿದರು. ನಂತರ ರಾಂಚಿಯ ಜೆಎನ್ ವಿ ನಲ್ಲಿ 12ನೇ ತರಗತಿ ಪೂರ್ಣಗೊಳಿಸಿದರು. ಸರ್ಕಾರಿ ಶಿಕ್ಷಣ ವ್ಯವಸ್ಥೆಯಲ್ಲಿಯೇ ಅವರು ತಮ್ಮ ಗುರಿಯತ್ತ ಸಾಗಿದರು.
2019ರ ಯುಪಿಎಸ್ ಸಿ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಅನ್ಷುಮನ್ ರಾಜ್ 107ನೇ ರ್ಯಾಂಕ್ ಪಡೆದರು. ಈ ಸಾಧನೆ ಅವರು ನಾಲ್ಕು ಪ್ರಯತ್ನಗಳ ನಂತರ ಪಡೆದರು. ಅಂದರೆ ಇದು ಒಂದೇ ಪ್ರಯತ್ನದಲ್ಲಿ ಬಂದ ಜಯವಲ್ಲ. ವಿಫಲತೆ, ಪುನಃ ಪ್ರಯತ್ನಗಳ ದೀರ್ಘ ಪ್ರಕ್ರಿಯೆಯ ಫಲ. ಯುಪಿಎಸ್ ಸಿ ಪರೀಕ್ಷೆ ತನ್ನ ಕಠಿಣ ಆಯ್ಕೆ ಪ್ರಕ್ರಿಯೆಗೆ ಪ್ರಸಿದ್ಧ. ಇಂತಹ ಪರಿಸ್ಥಿತಿಯಲ್ಲಿ ಒಂದು ರ್ಯಾಂಕ್ ಅಂದರೆ ಕೇವಲ ಸಂಖ್ಯೆ ಅಲ್ಲ; ಅದು ವರ್ಷಗಳ ಪರಿಶ್ರಮದ ದಾಖಲೆ.
ಗ್ರಾಮೀಣ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿ ಈ ಮಟ್ಟಕ್ಕೆ ಏರಿದದ್ದು ಅನೇಕ ಮಂದಿಗೆ ಪ್ರೇರಣೆ ನೀಡಿದೆ. ಬೆಳಕು ಮಬ್ಬಾಗಿರಬಹುದು, ಪರಿಸ್ಥಿತಿ ಕಠಿಣವಾಗಿರಬಹುದು, ಆದರೆ ಶಿಸ್ತಿನ ಅಭ್ಯಾಸ ಇದ್ದರೆ ಗುರಿಯತ್ತ ಸಾಗಿ ಯಶ ಕಾಣಬಹುದು. ಇದಕ್ಕೆ ಅನ್ಷುಮನ್ ರಾಜ್ ಅವರ ಕಥೆ ಜೀವಂತ ಸಾಕ್ಷಿ.