ಬೆಂಗಳೂರು, ಜೂ. 08 (DaijiworldNews/AA): ಖಾತೆ ಬಗ್ಗೆ ನನಗೆ ಯಾವುದೇ ಅಸಮಾಧಾನ ಇಲ್ಲ. ನಾನು ಸಂತೋಷದಿಂದ ಕೆಲಸ ಮಾಡುತ್ತೇನೆ ಎಂದು ಸಚಿವ ಬೈರತಿ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, "ಹೈಕಮಾಂಡ್, ಸಿಎಂ ಡಿಕೆಶಿ, ಸಿದ್ದರಾಮಯ್ಯ ಆಶೀರ್ವಾದ ಮಾಡಿ ನನಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಸಮರ್ಥವಾಗಿ ನಿಭಾಯಿಸುವ ಶಕ್ತಿ ದೇವರು ಕೊಡುವ ವಿಶ್ವಾಸ ಇದೆ. ಹಿಂದೆ ನಗರಾಭಿವೃದ್ಧಿ ಇಲಾಖೆಯಲ್ಲಿ ಹೊಸ ಕಾರ್ಯಕ್ರಮ ಮಾಡಿ ಉತ್ತಮವಾಗಿ ಇಲಾಖೆ ನಡೆಸಿದ್ದೆ. ಇದೇ ರೀತಿ ಕೆಲಸ ಸಾರಿಗೆ ಇಲಾಖೆಯಲ್ಲಿ ಮಾಡುತ್ತೇನೆ. ಹೈಕಮಾಂಡ್, ಕಾಂಗ್ರೆಸ್ಗೆ ಒಳ್ಳೆಯ ಹೆಸರು ತರುವ ಕೆಲಸ ಮಾಡುತ್ತೇನೆ" ಎಂದು ಹೇಳಿದರು.
"ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡೋರು ನಮ್ಮ ಕರ್ನಾಟಕದವರೇ. ಸಾರಿಗೆ ಇಲಾಖೆಯಲ್ಲಿ ರಾಮಲಿಂಗಾ ರೆಡ್ಡಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಇಲಾಖೆ ಸಮಸ್ಯೆ ಪರಿಹಾರ ಮಾಡುವ ಕೆಲಸ ಮಾಡುತ್ತೇನೆ. ಖಾತೆ ಬಗ್ಗೆ ನನಗೇನು ಬೇಸರ ಇಲ್ಲ. ಯಾವುದೇ ಇಲಾಖೆ ಕೊಟ್ಟರೂ ಸಂತೋಷವಾಗಿ ಕೆಲಸ ಮಾಡುತ್ತೇನೆ. ನಮ್ಮ ನಾಯಕರು, ಹೈಕಮಾಂಡ್ ನಾಯಕರು ಎಲ್ಲರೂ ಯೋಚನೆ ಮಾಡಿ ಇಷ್ಟು ದೊಡ್ಡ ಖಾತೆ ಕೊಟ್ಟಿದ್ದಾರೆ. ಸಂತೋಷದಿಂದ ಕೆಲಸ ಮಾಡುತ್ತೇನೆ" ಎಂದರು.