ಬೆಂಗಳೂರು, ಜೂ. 08 (DaijiworldNews/AA): ಪಕ್ಷಬೇಧ ಮರೆತು ಎಲ್ಲರನ್ನೂ ಒಟ್ಟಿಗೇ ಕರೆದುಕೊಂಡು ಹೋಗಿ. 2028ರ ವಿಧಾನಸಭೆ ಚುನಾವಣೆ ಗೆಲ್ಲುವುದು ನಿಮ್ಮ ಗುರಿಯಾಗಿರಲಿ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹಿಂದೆ ಆಗಿದ್ದು, ದ್ವೇಷ, ಅಸೂಯೆ, ಪ್ರತೀಕಾರ ಎಂಬುದನ್ನು ಮರೆಯಿರಿ. ಕೆಲವೊಮ್ಮೆ ತಪ್ಪು ಮಾಹಿತಿ, ಅಭಿಪ್ರಾಯಗಳಿಂದ ಯಡವಟ್ಟು ಆಗಿರಬಹುದು. ಆದರೆ ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಭವಿಷ್ಯದ ಗುರಿ ಮರೆಯಬೇಡಿ" ಎಂದು ತಿಳಿಸಿದರು.
"ಇವತ್ತು ಬಂದಿರುವ ಸಿಎಂ ಹುದ್ದೆ ನನ್ನದಲ್ಲ, ನಿಮ್ಮದು, ರಾಜ್ಯದ ಜನರದು. ನೀವು ಇಲ್ಲ ಅಂದ್ರೆ ನಾನು ಇಲ್ಲ. ನನಗೆ ಬಂದಿರುವ ಈ ಹುದ್ದೆ ಹಿಂದೆ ನಿಮ್ಮ ಪರಿಶ್ರಮ, ಪ್ರೀತಿ, ವಿಶ್ವಾಸ, ಹೋರಾಟ ಕೆಲಸ ಮಾಡಿದೆ. ನಿಮ್ಮ ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ" ಎಂದರು.