ಹೈದರಾಬಾದ್, ಜೂ. 08 (DaijiworldNews/AK): ಹೈದರಾಬಾದ್ ನಗರದ ಖಾಸಗಿ ಪಬ್ನಲ್ಲಿ ನಡೆಯುತ್ತಿದ್ದ ಸೆಕ್ಸ್ ದಂಧೆಯನ್ನ ಬಯಲಿಗೆಳೆಯಲು ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ರಹಸ್ಯ ಕಾರ್ಯಾಚರಣೆ ನಡೆಸಿದ್ದಾರೆ.

ಸಾಮಾನ್ಯ ಮಹಿಳೆಯಂತೆ ಪಬ್ಗೆ ತೆರಳಿ ರಹಸ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಬಳಿಕ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, 9 ಮಂದಿಯನ್ನ ವಶಕ್ಕೆ ಪಡೆದಿದ್ದಾರೆ.
ಕಿಂಗ್ಸ್ & ಕ್ವೀನ್ಸ್ ಪಬ್ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದ ಬಗ್ಗೆ ಆರೋಪ ಕೇಳಿಬಂದಿತ್ತು. ಪಬ್ಗೆ ಬರೋ ಯುವಕರನ್ನ ಸೆಳೆಯಲು ಯುವತಿಯರನ್ನು ಬಳಸಿಕೊಳ್ಳಲಾಗುತ್ತಿದೆ. ಈ ಮೂಲಕ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತದೆ ಅನ್ನೋ ಆರೋಪವೂ ಇತ್ತು. ಇದರ ವಿರುದ್ಧ ಡಿಸಿಪಿ ರಿತಿ ರಾಜ್ ರಹಸ್ಯ ಕಾರ್ಯಾಚರಣೆ ನಡೆಸಿದ್ದರು.
ಪಬ್ನಲ್ಲಿ ಅನೈತಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆಹಾಕಿದ್ದರು. ಬಳಿಕ ಪೊಲೀಸ್ ತಂಡದೊಂದಿಗೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಪಬ್ನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ದಾಳಿ ವೇಳೆ ನಾಲ್ವರು ಮಹಿಳೆಯರು ಮತ್ತು ಐವರು ಪುರುಷರು ಸೇರಿ ಒಟ್ಟು 9 ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಹಾಗೂ ಅನೈತಿಕ ಮಾನವ ಸಾಗಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.