ರಾಮನಗರ, ಜೂ. 07 (DaijiworldNews/TA): ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರ ಕನಕಪುರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸಿದರು. ಭರ್ಜರಿ ಸ್ವಾಗತದ ನಡುವೆ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, “ನಾನು ಮುಖ್ಯಮಂತ್ರಿ ಆಗಿದ್ದರೂ ನಿಮ್ಮ ಸೇವಕನೇ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯ” ಎಂದು ಹೇಳಿದರು.

ಕನಕಪುರ ಪ್ರವಾಸಕ್ಕೂ ಮುನ್ನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧ ಮೆಟ್ರೋ ನಿಲ್ದಾಣದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಹಾಗೂ ಝೀರೋ ಟ್ರಾಫಿಕ್ ವ್ಯವಸ್ಥೆಯಿಂದ ವಾಹನ ಸವಾರರಿಗೆ ಆಗುವ ಅನಾನುಕೂಲ ತಪ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡರು.
ಮೆಟ್ರೋ ಪ್ರಯಾಣದ ವೇಳೆ ಸಹ ಪ್ರಯಾಣಿಕರೊಂದಿಗೆ ಆತ್ಮೀಯವಾಗಿ ಬೆರೆತು ಮಾತನಾಡಿದ ಸಿಎಂ, ಬಳಿಕ ಸಿಲ್ಕ್ ಇನ್ಸ್ಟಿಟ್ಯೂಟ್ನಿಂದ ರಸ್ತೆ ಮಾರ್ಗವಾಗಿ ಕನಕಪುರದತ್ತ ತೆರಳಿದರು. ಹಾರೋಹಳ್ಳಿಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು.
ಜನರನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, “ನೀವು ನನ್ನ ಮೇಲೆ ಇಟ್ಟಿರುವ ವಿಶ್ವಾಸವೇ ನನ್ನನ್ನು ಮುಖ್ಯಮಂತ್ರಿ ಹುದ್ದೆವರೆಗೆ ತಲುಪಿಸಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಈ ಸ್ಥಾನದಲ್ಲಿದ್ದೇನೆ. ನಿಮ್ಮ ಯಾವುದೇ ಸಮಸ್ಯೆ ಇದ್ದರೂ ನಮ್ಮ ಮನೆಯ ಬಾಗಿಲು ಸದಾ ತೆರೆದಿರುತ್ತದೆ” ಎಂದು ಹೇಳಿದರು.
ಇಕ್ಬಾಲ್ ಹುಸೇನ್ ಅವರನ್ನು ಗೆಲ್ಲಿಸಿದ ಜನರಿಗೆ ಧನ್ಯವಾದ ತಿಳಿಸಿದ ಅವರು, “ಹೆಸರಿಗೆ ಇಕ್ಬಾಲ್ ಹುಸೇನ್ ಶಾಸಕನಾದರೂ, ರಾಮನಗರ ಜಿಲ್ಲೆಯ ಅಭಿವೃದ್ಧಿಯ ಹೊಣೆಗಾರಿಕೆಯನ್ನು ನಾನು ವಹಿಸಿಕೊಂಡಿದ್ದೇನೆ” ಎಂದು ಹೇಳಿದರು.
ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿದ ನಿರ್ಧಾರವನ್ನು ಸಮರ್ಥಿಸಿಕೊಂಡ ಸಿಎಂ, “ಈ ನಿರ್ಧಾರದಿಂದ ಭೂಮಿಯ ಮೌಲ್ಯ ಹೆಚ್ಚಾಗಿದೆ. ಆರಂಭದಲ್ಲಿ ವಿರೋಧ ವ್ಯಕ್ತವಾಗಿದ್ದರೂ, ಈಗ ಅದರ ಲಾಭ ಎಲ್ಲರಿಗೂ ಗೋಚರಿಸುತ್ತಿದೆ” ಎಂದರು.
ಕನಕಪುರದಲ್ಲಿ ಶೀಘ್ರದಲ್ಲೇ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗುವುದು ಎಂದು ಘೋಷಿಸಿದ ಸಿಎಂ, “ಇದರಿಂದ ತುಮಕೂರು, ಬೆಂಗಳೂರು ಗ್ರಾಮಾಂತರ ಹಾಗೂ ಸುತ್ತಮುತ್ತಲಿನ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಸ್ಥಳೀಯವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದರು.
ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, “ದೇವರು ಯಾರಿಗೂ ವರ ಅಥವಾ ಶಾಪ ನೀಡುವುದಿಲ್ಲ, ಅವಕಾಶ ಮಾತ್ರ ನೀಡುತ್ತಾನೆ. ಜನರು ಇನ್ನಷ್ಟು ವಿಶ್ವಾಸ ತೋರಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೆ 136ಕ್ಕಿಂತ ಹೆಚ್ಚು ಸ್ಥಾನಗಳು ದೊರೆಯಲಿವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದ ವಿವಿಧ ಭಾಗಗಳಲ್ಲಿ ದಿನಪೂರ್ತಿ ರೋಡ್ ಶೋ ಹಾಗೂ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸಿಎಂ, ಜನರ ಅಭಿನಂದನೆ ಸ್ವೀಕರಿಸಿದರು.