ಬೆಂಗಳೂರು, ಜೂ. 07 (DaijiworldNews/TA): ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಬಳಿಕ ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರ ಕನಕಪುರಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡುತ್ತಿದ್ದಾರೆ. ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಆಯೋಜಿಸಿರುವ ‘ಕೃತಜ್ಞತಾ ಸಮರ್ಪಣಾ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಇಂದು ದಿನಪೂರ್ತಿ ಕನಕಪುರ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದಾರೆ.

ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧ ಮೆಟ್ರೋ ನಿಲ್ದಾಣದಿಂದ ಮೆಟ್ರೋ ರೈಲಿನಲ್ಲಿ ಪ್ರಯಾಣ ಆರಂಭಿಸಿದರು. ಬಳಿಕ ಕನಕಪುರ ರಸ್ತೆಗೆ ತಲುಪಿ ರಸ್ತೆ ಮಾರ್ಗದ ಮೂಲಕ ವಿವಿಧ ಗ್ರಾಮಗಳು ಹಾಗೂ ಪಟ್ಟಣ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದ ಮತದಾರರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ತಂದುಕೊಟ್ಟ ಹಿನ್ನೆಲೆ, ಕ್ಷೇತ್ರದ ಜನರಿಗೆ ಧನ್ಯವಾದ ಅರ್ಪಿಸಲು ಸಿಎಂ ತೆರಳಿದ್ದಾರೆ. ಕ್ಷೇತ್ರದ ವಿವಿಧ ಭಾಗಗಳಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಅಭಿನಂದನೆ ಸ್ವೀಕರಿಸಲಿದ್ದಾರೆ.
ಮುಖ್ಯಮಂತ್ರಿಯವರ ಆಗಮನದ ಹಿನ್ನೆಲೆಯಲ್ಲಿ ಕ್ಷೇತ್ರದಾದ್ಯಂತ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಾರೋಹಳ್ಳಿಯಲ್ಲಿ ಅಭಿಮಾನಿಗಳು ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಹಾಗೂ ಕೆಂಪು ಮೆಣಸಿನಕಾಯಿಯಿಂದ ತಯಾರಿಸಿರುವ ವಿಶೇಷ ಹಾರವನ್ನು ಸಿದ್ಧಪಡಿಸಿದ್ದು, ಕ್ರೇನ್ ಮೂಲಕ ಸಿಎಂಗೆ ಹಾಕಲು ಯೋಜಿಸಿದ್ದಾರೆ. ಇದರ ಮೌಲ್ಯ ಸುಮಾರು ರೂ. 2 ಲಕ್ಷ ಎಂದು ತಿಳಿದುಬಂದಿದೆ.
ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಕನಕಪುರ ಕ್ಷೇತ್ರದ 20ಕ್ಕೂ ಹೆಚ್ಚು ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ವಿವಿಧ ಗ್ರಾಮಗಳು ಹಾಗೂ ಪಟ್ಟಣ ಪ್ರದೇಶಗಳಲ್ಲಿ ರೋಡ್ ಶೋ ಮತ್ತು ಸಾರ್ವಜನಿಕ ಸ್ವಾಗತ ಕಾರ್ಯಕ್ರಮಗಳು ನಡೆಯಲಿವೆ.
ಪ್ರಮುಖ ಕಾರ್ಯಕ್ರಮಗಳ ವೇಳಾಪಟ್ಟಿ :
ಬೆಳಗ್ಗೆ 10:00 – ಹಾರೋಹಳ್ಳಿ ಸರ್ಕಲ್
10:30 – ತುಂಗಣಿ
11:00 – ಟಿ. ಬೇಕುಪ್ಪೆ ಸರ್ಕಲ್
11:30 – ನಾರಾಯಣಪುರ
12:00 – ಕೋಡಿಹಳ್ಳಿ
12:30 – ಹೇರಿಂದ್ಯಾಪನಹಳ್ಳಿ
01:00 – ಕೊಳಗೊಂಡನಹಳ್ಳಿ
01:30 – ಹುಣಸನಹಳ್ಳಿ
02:00 – ಹೊಸದುರ್ಗ
03:00 – ಹೂಕುಂದ
03:30 – ಮುಳ್ಳಹಳ್ಳಿ
04:00 – ನಲ್ಲಹಳ್ಳಿ
04:30 – ದೊಡ್ಡ ಆಲಹಳ್ಳಿ
05:00 – ಸಾತನೂರು
05:30 – ಕುರುಬರಹಳ್ಳಿ ಗೇಟ್
06:00 – ಕಬ್ಬಾಳು
06:30 – ಸೋಮದ್ಯಾಪನಹಳ್ಳಿ
07:00 – ಹಳ್ಳಿಮಾರನಹಳ್ಳಿ
07:30 – ಹಳೆ ಪೊಲೀಸ್ ಸ್ಟೇಷನ್ ಸರ್ಕಲ್, ಮೇಗಳ ಬೀದಿ, ಕನಕಪುರ ಟೌನ್
08:00 – ಚನ್ನಬಸಪ್ಪ ಸರ್ಕಲ್, ಕನಕಪುರ ಟೌನ್
ಕಾರ್ಯಕ್ರಮಗಳ ಬಳಿಕ ರಾತ್ರಿ 9 ಗಂಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕನಕಪುರದಿಂದ ಬೆಂಗಳೂರಿಗೆ ವಾಪಸಾಗಲಿದ್ದಾರೆ.